




ಮಂಗಳೂರು: ಮದುವೆಯಾದ ಆರೇ ತಿಂಗಳಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರದಬ್ಬಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
6 ತಿಂಗಳ ಹಿಂದೆ ಮಾರ್ನಮಿ ಕಟ್ಟೆಯ ಹಣ್ಣು ತರಕಾರಿ ವ್ಯಾಪಾರಿಯಾಗಿದ್ದ ಮಹಮ್ಮದ್ ಹುಸೇನ್ ಎಂಬಾತನನ್ನು ಶಬಾನಾ ಮದುವೆಯಾಗಿದ್ದರು. ಇದೀಗ ಆಕೆಯ ಮೇಲೆ ಹಲ್ಲೆ ನಡೆಸಿ ತಲಾಖ್ ಕೊಟ್ಟು, ಮನೆಯಿಂದ ಹೊರದಬ್ಬಿದ್ದಾನೆ. ಗಂಡನ ಅನ್ಯಾಯಕ್ಕೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮಹಮ್ಮದ್ ಹುಸೇನ್ ಶಬಾನಾ ಎಂಬುವವರನ್ನು ಎರಡನೇ ಮದುವೆಯಾಗಿದ್ದ. ಮೊದಲ ಮದುವೆಯಿಂದ 2 ಮಕ್ಕಳನ್ನು ಹೊಂದಿದ್ದ ಹುಸೇನ್ ಆಕೆಯಿಂದ ಹಣ ಪಡೆದು ಬಳಿಕ ತಲಾಖ್ ನೀಡಿದ್ದ. ನಂತರ ಶಬಾನಾ ಅವರನ್ನು ಮದುವೆಯಾಗಿ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಬಲವಂತವಾಗಿ ಪಡೆದಿದ್ದ.
ಗರ್ಭಿಣಿಯಾದ ಬಳಿಕ ಒತ್ತಾಯ ಪೂರ್ವಕವಾಗಿ ಮಾತ್ರೆ ತಿನ್ನಿಸಿ ಅಬಾರ್ಷನ್ ಮಾಡಿಸಿದ್ದ ಎಂಬ ಗಂಭೀರ ಆರೋಪವನ್ನು ಶಬಾನಾ ಮಾಡುತ್ತಿದ್ದಾರೆ . ಇದೀಗ ಹಣಕ್ಕಾಗಿ ಪೀಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿ, ತಲಾಖ್ ನೀಡಿದ್ದಾನೆ. ಈ ಹಿಂದೆ ಇದ್ದ ಪತ್ನಿಗೂ ಕೂಡ ಹಣಕ್ಕಾಗಿ ಪೀಡಿಸಿ ಕೊನೆಗೆ ಹುಸೇನ್ ತಲಾಖ್ ನೀಡಿದ್ದ. ಇದೀಗ ಎರಡನೇ ಪತ್ನಿ ಶಬಾನಾಗೂ ತಲಾಖ್ ನೀಡಿ ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಶಬಾನಾ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.