

ಜುಲೈ 5 ರಂದು ಬಿಡುಗಡೆಗೆ ಸಿದ್ಧವಾಗಿದೆ ವಿಭಿನ್ನ ಕಥಾಹಂದರದ ಧರ್ಮದೈವ
ವಿಭಿನ್ನ ಕಥಾ ಹಂದರವನ್ನೊಳಗೊಂಡ ಧರ್ಮದೈವ ತುಳು ಚಿತ್ರ ಪೂಣೆ ಹಾಗೂ ಮುಂಬೈನಲ್ಲಿ ಮೊದಲ ಪ್ರೀಮಿಯರ್ ಶೋನಲ್ಲಿ ಸಿನಿ ಪ್ರಯರ ಮನಸ್ಸು ಗೆದ್ದುಕೊಂಡಿದೆ.
ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ, ಹಾಗೂ ನವೀನ್ ಶೆಟ್ಟಿ ಬಾಳಿಕೆಯವರ ಮುಂದಾಳತ್ವದಲ್ಲಿ ಕಾರ್ಯರೂಪದಲ್ಲಿರುವ ತ್ರಿರಂಗ ಸಂಗಮ ಮುಂಬಯಿ ಆಶ್ರಯದಲ್ಲಿ ಜೂ. 23 ರಂದು ಬೆಳಗ್ಗೆ 9.30 ಕ್ಕೆ ಥಾಣೆಯ ವಿವಿಯಾನ ಮಾಲ್‌ನಲ್ಲಿ ಧರ್ಮದೈವ ತುಳು ಚಿತ್ರ ಪ್ರೀಮಿಯರ್ ಶೋ ಪ್ರದರ್ಶನಗೊಂಡಿದೆ. ಈ ವೇಳೆ ಶೋ ಹೌಸ್‌ಫುಲ್ ಮೂಲಕ ಸಿನಿ ಪ್ರಿಯರು ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ್ ಶೆಟ್ಟಿ ಬಹಳಷ್ಟು ಶ್ರದ್ಧೆ, ಭಕ್ತಿ, ನಂಬಿಕೆಯಿಂದ ಈ ಚಿತ್ರವನ್ನು ನಿರ್ಮಿಸಿದ್ದು, ನಿತಿನ್ ರೈ ಕುಕ್ಕುವಳ್ಳಿ ತನ್ನದೇ ಕಥೆಯಿಂದ ಕೂಡಿದ ಧರ್ಮದೈವ ಚಿತ್ರದ ನಿರ್ದೇಶಕರಾಗಿ ಚಿತ್ರಕ್ಕೆ ಜೀವ ಕಲೆಯನ್ನು ತುಂಬಿದ್ದಾರೆ. ಚಿತ್ರಕಥೆ,ಸಂಭಾಷಣೆಯನ್ನು ಹಮೀದ್ ಪುತ್ತೂರು ನೀಡಿದ್ದು, ಅರುಣ್ ರೈ ಪುತ್ತೂರು ಉತ್ತಮ ಛಾಯಾಗ್ರಹಣದ ಮೂಲಕ ಧರ್ಮದೈವದ ಮಹಿಮೆ ಪ್ರೇಕ್ಷಕರನ್ನು ಆಕರ್ಷಿಸುವ ಮೂಲಕ ತನ್ನ ಪ್ರತಿಭೆ ಹಾಗೂ ಕೈಚಳಕದಿಂದ ಚೆನ್ನಾಗಿ ಮೂಡಿಬರುವಂತೆ ಮಾಡಿದ್ದಾರೆ.
ಸಿನಿಮಾದಲ್ಲಿ ತುಳು ವಿದ್ವಾಂಸ ಕೆ ಕೆ ಪೇಜಾವರ ರಚಿಸಿರುವ ಹಾಡಿಗೆ ಕರಾವಳಿಯ ಖ್ಯಾತ ಭಾಗವತ ಯಕ್ಷಧ್ರುವ ಪಟ್ಲಸತೀಶ್ ಶೆಟ್ಟಿಯವರು ಧ್ವನಿಯಾಗಿದ್ದು, ಇವರ ಧ್ವನಿಯಲ್ಲಿ ಮೂಡಿಬಂದ ಸಂಪುಲ್ಲ ಜಾಗಡೆ ಎನ್ನುವ ಹಾಡು ಈಗಾಗಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಹಾಗೆಯೇ ಸಮನ್ವಿ ಆರ್ ರೈ ನುಳಿಯಾಲು ಇವರ ಧ್ವನಿಯಲ್ಲಿ ಮೂಡಿಬಂದ ಎನ್ನ ಉಡಲ ಕವಿತೆ ಎನ್ನುವ ಹಾಡು ಬಹಳಷ್ಟು ವೈರಲ್ ಆಗಿದೆ. ಸಿನಿಮಾದಲ್ಲಿ ಪುತ್ತೂರು ಹಾಗೂ ಕರಾವಳಿ ಪರಿಸರದ ಹೊಸ ಮುಖ ಕಲಾವಿದರೇ ಅಭಿನಯಿಸಿರುವುದು ಈ ಚಿತ್ರದ ವಿಶೇಷತೆಯಾಗಿದೆ. ತುಳು ರಂಗಭೂಮಿ ಹಾಗೂ ಚಲನಚಿತ್ರನಟ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ ಸೇರಿದಂತೆ ದಯಾನಂದ ರೈ ಬೆಟ್ಟಂಪಾಡಿ, ರವಿ, ಭರತ್ ಶೆಟ್ಟಿ, ರಾಜೇಶ್, ಕೌಶಿಕ್ ಕುಂಜಾಡಿ, ಅಭಿಯಿಸಿದ್ದಾರೆ. ಕಥಾ ನಾಯಕಿಯ ಪಾತ್ರದಲ್ಲಿ ಕೊಡಗಿನ ಗ್ರೀಷಿಯಲ್ ಕಲಿಯಂಡ, ಹಾಗೂ ಬಾಲನಟಿ ಖ್ಯಾತಿಯ ದೀಕ್ಷಾ ರೈ ಪುತ್ತೂರು, ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ, ರವಿ ಸಾಲ್ಯಾನ್, ಸಂದೀಪ್ ಪೂಜಾರಿಮೊದಲಾದವರು ನಟಿಸಿದ್ದಾರೆ.
ಜುಲೈ 5 ರಂದು ಧರ್ಮದೈವ ಚಿತ್ರ ಬಿಡುಗಡೆಯಾಗಲಿದ್ದು, ತುಳು ಸಿನಿ ಲೋಕದಲ್ಲಿ ದಾಖಲೆಯತ್ತ ಹೆಜ್ಜೆ ಹಾಕಲು ಮುಂದಾಗಿದೆ.