ತುಮಕೂರು: ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.


ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ಮಹಿಳೆಯ ಮೃತದೇಹವಿದ್ದು, ಸಮೀಪ ಅರಿಶಿನ, ಕುಂಕುಮ ಚೆಲ್ಲಾಡಿ, ಪೂಜೆ ಸಲ್ಲಿಸಿರುವ ದೃಶ್ಯಗಳಿದ್ದವು. ಹಾಗಾಗಿ ನಿಧಿಗಾಗಿ ಬಲಿ ಕೊಟ್ಟಿರಬಹುದು ಎಂಬ ಶಂಕೆ ಮೂಡಿದೆ.

ಶನಿವಾರ ಕುರಿಗಾಹಿಗಳು ಕುರಿ ಮೇಯಿಸಲು ಹೋಗಿದ್ದ ವೇಳೆ ದುರ್ವಾಸನೆ ಬಂದಿತ್ತು. ದೇವಾಲಯದ ಅಕ್ಕಪಕ್ಕ ನೋಡಿದಾಗ ಮಹಿಳೆಯ ಕೂದಲು ಕಂಡು ಬಂದಿದೆ. ನಂತರ ಮೃತದೇಹ ಸಂಪೂರ್ಣ ಗುರುತು ಸಿಗದಂತೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುರಿಗಾಹಿಗಳು ದೇವಾಲಯದ ಬಳಿ ಶವ ಬಿದ್ದಿರುವ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗಾಬರಿಗೊಂಡ ಗ್ರಾಮಸ್ಥರು ಸ್ಥಳಕ್ಕೆ ಬಂದು ಖಚಿತಪಡಿಸಿಕೊಂಡ ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

