ಮಂಗಳೂರು :ಸಮುದ್ರತೀರಕ್ಕೆ ವಿಹಾರಕ್ಕೆಂದು ತೆರಳಿದ್ದ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಮುದ್ರಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ವೇಳೆ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ.
ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯೆಶ್ವಿತ್ (18), ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್ (18) ಸಮುದ್ರಪಾಲಾದವರು.
ಇಬ್ಬರು ಸಮೀಪದ ಸೋಮೇಶ್ವರ ಪರಿಜ್ಞಾನ ಪಿಯುಸಿ ಕಾಲೇಜಿನ ದ್ವಿ ತೀಯ ವರ್ಷ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜು ಮುಗಿಸಿ ಮಧ್ಯಾಹ್ನ ಬಳಿಕ ಸಮುದ್ರ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ಸಮುದ್ರದ ಅಲೆಗಳ ನಡುವೆ ಸಿಲುಕಿದರೆ, ಇನ್ನೋರ್ವ ವಿದ್ಯಾರ್ಥಿ ಆತನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಇಬ್ಬರು ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಭೇಟಿ ನೀಡಿದ್ದಾರೆ. ಮೃತ ದೇಹಕ್ಕಾಗಿ ಸ್ಥಳೀಯ ಈಜುಗಾರರು, ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ.
ಸ್ಥಳದಲ್ಲಿರುವ ಬಂಡೆಗಳಲ್ಲಿ ಹಾಗೂ ಇಲಾಖೆ ವತಿಯಿಂದ ನಾಮಫಲಕಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಕೋರಲಾಗಿದೆ . ಆದರೂ ಸ್ಥಳದಲ್ಲಿ ವಿಹಾರಕ್ಕೆಂದು ಬರುವ ವಿದ್ಯಾರ್ಥಿಗಳು, ಪ್ರವಾಸಿಗರು ಹೋಂಗಾಡ್೯ಗಳ ಮತ್ತು ನಾಮಫಲಕಗಳನ್ನು ಗಮನಿಸಿಯೂ ಸಮುದ್ರಕ್ಕೆ ಇಳಿದು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ಥಳಕ್ಕೆ ಬರುವವರು ಮುಂಜಾಗೃತವಹಿಸಿ ವಿಹರಿಸುವಂತೆ ಉಳ್ಳಾಲ ಠಾಣಾಧಿಕಾರಿ ಎಚ್ಚರಿಕೆಸೂಚನೆ ನೀಡಿದ್ದಾರೆ.