



ಉಡುಪಿ: ಮಲ್ಪೆ ಮಸೀದಿಯ ಆವರಣದೊಳಗೆ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.
ಈ ವಿಷಯವನ್ನು ಮಲ್ಪೆ ಜಂಕ್ಷನ್ ಬಳಿಯ ಜಾಮಿಯಾ ಮಸೀದಿಯ ವ್ಯವಸ್ಥಾಪಕ ಸುಹೈಲ್ (27) ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದೂರಿನ ಪ್ರಕಾರ, ಮಸೀದಿ ಚಟುವಟಿಕೆಗಳಿಗೆ ಸಂಬಂಧಿಸಿದ ಎರಡು ಅಂತಸ್ತಿನ ಕಟ್ಟಡ ಸಮೀಪದಲ್ಲಿದೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಬಳಕೆಗಾಗಿ ಅದರ ಪಕ್ಕದಲ್ಲಿ ಇತ್ತೀಚೆಗೆ ಶೌಚಾಲಯವನ್ನು ನಿರ್ಮಿಸಲಾಗಿದೆ.
ಏಪ್ರಿಲ್ 14 ರಂದು ಮಧ್ಯಾಹ್ನ 1:10 ರ ಸುಮಾರಿಗೆ ಸುಹೈಲ್ ಶೌಚಾಲಯವನ್ನು ಪ್ರವೇಶಿಸಿದಾಗ ಒಳಗೆ ನವಜಾತ ಶಿಶುವಿನ ಮೃತದೇಹ ಕಂಡು ಬಂದಿದೆ. ಶೌಚಾಲಯದ ಗೋಡೆಯ ಮೇಲೆ ರಕ್ತದ ಕಲೆಗಳು ಕೂಡ ಕಂಡುಬಂದಿವೆ. ಪ್ರಾಥಮಿಕ ಅವಲೋಕನಗಳ ಪ್ರಕಾರ, ನವಜಾತ ಶಿಶು ಜನನಕ್ಕೂ ಮೊದಲು, ಜನನದ ಸಮಯದಲ್ಲಿ ಅಥವಾ ಜನನದ ಸ್ವಲ್ಪ ಸಮಯದ ನಂತರ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬರು ಮಗುವಿನ ಜನನವನ್ನು ಮರೆಮಾಚುವ ಪ್ರಯತ್ನದಲ್ಲಿ ರಹಸ್ಯವಾಗಿ ಮಗುವಿನ ಮೃತದೇಹವನ್ನು ಶೌಚಾಲಯದಲ್ಲಿರಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.