


ಉಡುಪಿ : ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಟೂರಿಸ್ಟ್ ಬೋಟೊಂದು ಮಗುಚಿ ಬಿದ್ದ ಪರಿಣಾಮ ಪ್ರವಾಸಿಗರು ಸಮುದ್ರ ಪಾಲಾಗಿದ್ದು ಇಬ್ಬರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಟೂರಿಸ್ಟ್ ಬೋಟ್ ನಲ್ಲಿ 15 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ಅವಘಡದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತರು ಶಂಕ್ರಪ್ಪ(22) ಹಾಗೂ ಸಿಂಧು(23) ಎಂದು ಗುರುತಿಸಲಾಗಿದೆ. ದೀಶಾ(26) ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಧರ್ಮರಾಜ್ ಎಂಬವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ದುರಂತ ನಡೆದ ಕೂಡಲೇ ಎಚ್ಚೆತ್ತ ಸ್ಥಳೀಯರು ನೆರವಿಗೆ ಧಾವಿಸಿ ಪ್ರವಾಸಿಗರನ್ನು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ಪ್ರವಾಸಿಗರು ಬೋಟ್ ನಲ್ಲಿ ತೆರಳುವಾಗ ಸುರಕ್ಷಿತ ಕ್ರಮ ಕೈಗೊಳ್ಳದಿರುವುದೇ ದುರ್ಘಟನೆಗೆ ಕಾರಣ ಎನ್ನಲಾಗಿದ್ದು, ಜಾಕೆಟ್ ಕೂಡ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ಪೊಲೀಸರು ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದು, ಮೈಸೂರಿನ ಸರಸ್ವತಿ ಪುರಂನಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರು ಬಿಪಿಒ ಕಾಲ್ ಸೆಂಟರ್‌ನ ಉದ್ಯೋಗಿಗಳು ಎಂದು ತಿಳಿದುಬಂದಿದೆ. ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಹೊರಟಿರುವ ಬೋಟ್ ಅಪಾಯಕಾರಿ ಸ್ಥಳವಾದ ಅಳಿವೆ ಬಾಗಿಲು ಬಳಿ ಚಲಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.








