ಉಳ್ಳಾಲ : ದ್ವಿಚಕ್ರ ವಾಹನ ಕಳ್ಳನನ್ನು ಕೊಣಾಜೆ ಪೊಲೀಸರು ಅರೆಸ್ಟ್ ಮಾಡಿದ್ದು, ಆರೋಪಿಯಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಉಳ್ಳಾಲ ತಾಲೂಕಿನ ನಿತ್ಯಾನಂದ ನಗರ ಬೆಳ್ಮ ಕನಕೂರು ಸೈಟ್ ನಿವಾಸಿ ಹುಸೈನ್ ಜಾಹೀದ್ (24) ಎಂದು ಗುರುತಿಸಲಾಗಿದೆ.
ಆರೋಪಿ ಅಕ್ಟೋಬರ್ 22 ರಂದು ಅಂಬ್ಲಮೊಗರು ಗ್ರಾಮದ ತಿಲಕನಗರ ಎಂಬಲ್ಲಿನ ಐಸಮ್ಮ ಎಂಬವರ ಹೋಂಡಾ ಡೀಯೋ ಮತ್ತು ನವೆಂಬರ್ 16 ರಂದು ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಗುಲಾಮ್ ಹುಸೇನ್ ಎಂಬವರು ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ವಾಹನ ಕಳುವು ಮಾಡಿದ್ದ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ತನಿಖೆಯನ್ನು ಕೈಗೆತ್ತಿಕೊಂಡಿದ್ದ ಕೊಣಾಜೆ ಠಾಣೆಯ ಪಿ.ಎಸ್.ಐ ಅಶೋಕ್ ಮತ್ತು ಸಿಬಂದಿ ಈ ಎರಡೂ ಪ್ರಕರಣಗಳ ಆರೋಪಿ ಹುಸೇನ್ ಜಾಹೀದ್ ನನ್ನು ಡಿಸೆಂಬರ್ 1 ರಂದು ಬಂಧಿಸಿ ಅಂಬ್ಲಮೊಗರು ಹಾಗೂ ದೇರಳಕಟ್ಟೆಯಲ್ಲಿ ಕಳ್ಳತನ ಮಾಡಿದ್ದ ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ಕೆಂಪು ಬಣ್ಣದ ಸುಜುಕಿ ಆ್ಯಕ್ಸೆಸ್ ಸ್ಕೂಟರನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.