ಉಳ್ಳಾಲ: ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನ ಕತ್ತು ಹಿಸುಕಿ ಕೊಂದು ನಂತರ ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ.
ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ (45) ಕೊಲೆಯಾದ ಮಹಿಳೆ ಮತ್ತು ಅಕೆಯ ಪತಿ ಶಿವಾನಂದ ಪೂಜಾರಿ (55)ಆತ್ಮಹತ್ಯೆ ಮಾಡಿಕೊಂಡವರು.
ಇಂದು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಶೋಭಾ ಅವರು ಮನೆ ಹತ್ತಿರದ ಇನ್ನೂರು ಗುತ್ತು ಕುಟುಂಬಸ್ಥರ ಮನೆಯಿಂದ ಗೊಬ್ಬರ ತಂದಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಇನ್ನೂರು ಗುತ್ತು ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾನೆ.
ಆಗ ಪಕ್ಕದ ಮನೆಯ ಶಕುಂತಳ ಶೆಟ್ಟಿ ಅವರು ಶೋಭಾ ಅವರ ಮನೆಯೊಳಗೆ ಪ್ರವೇಶಿಸಿದಾಗ ಶೋಭಾ ಅವರು ಬೆಡ್ ರೂಮಿನ ಮಂಚದಲ್ಲಿ ಹೆಣವಾಗಿದ್ದರು. ಗಾಬರಿಗೊಂಡ ಶಕುಂತಳಾ ಅವರು ಮನೆಮಂದಿಗೆ ತಿಳಿಸಿದಾಗ ಪಕ್ಕದ ತೋಟದಲ್ಲಿ ಮರಕ್ಕೆ ಗಂಡ ಶಿವಾನಂದ ಅವರು ನೇಣು ಬಿಗಿದುಕೊಂಡಿದ್ದು ತಿಳಿದುಬಂದಿದೆ
ಶಿವಾನಂದ ಪೂಜಾರಿ ಅವರು ಪೈಂಟರ್ ಕೆಲಸ ಮಾಡುತ್ತಿದ್ದು ಪತ್ನಿ ಅಲ್ಲದೆ ಮಗಳ ಮೇಲೂ ನಿರಂತರವಾಗಿ ಸಂಶಯ ಪಡುತ್ತಿದ್ದರು. ಎನ್ನಲಾಗಿದೆ. ಸೈಕೋ ರೀತಿ ವರ್ತಿಸುತ್ತಿದ್ದು ನೆರೆಹೊರೆಯವರಲ್ಲೂ ವಿನಾ ಕಾರಣ ತಗಾದೆ ಎತ್ತಿ ಗಲಾಟೆ ನಡೆಸುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ಪತ್ನಿ ಶೋಭಾ ಅವರಿಗೆ ಯಾರಾದರೂ ಫೋನ್ ಕರೆ ಮಾಡಿದರೂ ಸೈಕೋ ಪತಿರಾಯ ಗಲಾಟೆ ನಡೆಸುತ್ತಿದ್ದನೆಂದು ನೆರೆಹೊರೆಯ ನಿವಾಸಿಗಳು ತಿಳಿಸಿದ್ದಾರೆ.
ಶೋಭಾ ಅವರ ಕಿರಿಯ ಮಗಳು ಎರಡು ವರ್ಷದ ಹಿಂದಷ್ಟೆ ಮದುವೆಯಾಗಿದ್ದಳು. ಹಿರಿಯ ಮಗ ಕಾರ್ತಿಕ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ. ಸೈಕೋ ತಂದೆ ಮಾಡಿದ ಹೀನ ಕೃತ್ಯಕ್ಕೆ ಮಕ್ಕಳೇ ಬಾಯಿಗೆ ಬಂದ ರೀತಿ ಬೈದು ತಾಯಿ ಮೃತದೇಹದ ಮುಂದ ಕಣ್ಣೀರಿಟ್ಟಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.