ಉಪ್ಪಿನಂಗಡಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಪ್ಪಿನಂಗಡಿ ಶಾಖೆಯ 2 ಎಟಿಎಂ ಮಷೀನ್ ಹಾಗೂ ರೂಮ್ ನಲ್ಲಿದ್ದ 3 ಸಿಸಿಟಿವಿ ಕ್ಯಾಮೆರಾವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಜಖಂ ಗೊಳಿಸಿ ಕಳವಿಗೆ ಯತ್ನಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಡಬ ತಾಲೂಕಿನ ಸವಣೂರು ಗ್ರಾಮದ ಶಾಂತಿನಗರ ಮಾಂತೇರು ನಿವಾಸಿ ಸಮೀರ್ ಯಾನೆ ಅಮ್ಮಿ (23) ಎಂಬಾತನೇ ಬಂಧಿತ ಆರೋಪಿ.

ಆರೋಪಿಯು ಎ.27 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಪ್ಪಿನಂಗಡಿ ಶಾಖೆಯ 2 ಎಟಿಎಂ ಮಷೀನ್ ಹಾಗೂ ರೂಮ್ ನಲ್ಲಿದ್ದ 3 ಸಿಸಿಟಿವಿ ಕ್ಯಾಮೆರಾವನ್ನು ಜಖಂ ಗೊಳಿಸಿದ್ದು, ಸೊತ್ತುಗಳ ಮೌಲ್ಯ ಸುಮಾರು 6 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕಗೊಳ್ಳುವಂತೆ ಬ್ಯಾಂಕ್ ಮ್ಯಾನೇಜರ್ ಶ್ರೀಧರ್ ರವರು ನೀಡಿರುವ ದೂರಿನನ್ವಯ ಉಪ್ಪಿನಂಗಡಿ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಸೋನಾವಣೆ ರಿಷಿಕೇಶ್, ಐಪಿಎಸ್ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಭಾಸ್ಕರ್ ಒಕ್ಕಲಿಗ ರವರ ಆದೇಶದ ಮೇರೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗದ ಕು| ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಉಮೇಶ್ ಉಪ್ಪಳಿಗೆ ಸಿ.ಪಿ.ಐ ಪುತ್ತೂರು ಗ್ರಾಮಾಂತರ ವೃತ್ತರವರ ನೇತೃತ್ವದಲ್ಲಿ ಈ ಪ್ರಕರಣವನ್ನು ಪತ್ತೆ ಹಚ್ಚಲು ಶ್ರೀ ಕುಮಾರ್ ಸಿ ಕಾಂಬ್ಲೆ ಪಿ.ಎಸ್.ಐ ಉಪ್ಪಿನಂಗಡಿ, ಪ್ರೊಬೆಷನರಿ ಪಿಎಸ್ಐ ಅನಿಲ್ ಕುಮಾರ್ ಡಿ. ಸಿಬ್ಬಂದಿಗಳಾದ ಎಎಸ್ಐ ಚೋಮ ಪಿ ಹರಿಶ್ಚಂದ್ರ ಹಾಗೂ ವೃತ್ತ ಕಚೇರಿಯ ಸಿಬ್ಬಂದಿ ಜಗದೀಶ್ ಎ, ಶಿವರಾಜ್ ಮತ್ತಿತರರು ಭಾಗವಹಿಸಿದ್ದರು.

ಪೊಲೀಸರು ಆರೋಪಿಯನ್ನು 48 ಗಂಟೆಗಳ ಒಳಗಡೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.










