


ಸತತ 20 ವರ್ಷಗಳ ಬಳಿಕ ಅಮೆರಿಕಾ ಸೇನೆ ಅಫ್ಘಾನಿಸ್ತಾನದಿಂದ ವಾಪಾಸ್ಸಾಗಿದೆ. ಸುಧೀರ್ಘ ಹೋರಾಟದ ಬಳಿಕ ನಿನ್ನೆ ಸೇನೆಯ ಕೊನೆಯ ವಿಮಾನ ಕಾಬೂಲ್ ಏರ್ಪೋರ್ಟ್ ತೊರೆದಿದೆ. ಸೇನೆ ಹಿಂಪಡೆದಿರೋದಕ್ಕೆ ಟೀಕೆಗಳು ಕೇಳಿ ಬರ್ತಿರೋ ನಡುವೆ ವಾಪಸಾತಿಯನ್ನ ಅಮೆರಿಕಾ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ. ಐಸಿಸ್-ಕೆ ಉಗ್ರರ ವಿಚಾರದಲ್ಲಿ ಮಾತ್ರ ದೊಡ್ಡಣ್ಣನ ಕೋಪವಿನ್ನೂ ತಣ್ಣಗಾಗಿಲ್ಲ.
ಎರಡು ದಶಕ, ಸತತ ಎರಡು ದಶಕಗಳ ಬಳಿಕ ಅಮೆರಿಕಾ ಸೇನೆ ಅಫ್ಘಾನ್ನಿಂದ ವಾಪಸ್ಸಾಗಿದೆ. ಉಗ್ರರ ಹೆಡೆಮುರಿ ಕಟ್ಟಲೆಂದೇ ಅಫ್ಘಾನ್ಗೆ ತೆರಳಿದ್ದ ಅಮೆರಿಕಾ ಸೇನೆ, ಇದೀಗ ತವರೂರಿಗೆ ಹಿಂದಿರುಗಿದೆ. ಇಷ್ಟು ದಿನ ಅಫ್ಘಾನ್ನ ಜನರ ರಕ್ಷಣೆಯಲ್ಲಿದ್ದ ಅಮೆರಿಕಾ ಸೈನಿಕರು ತವರಿಗೆ ವಾಪಾಸ್ಸಾಗಿದ್ದಾರೆ.
ಹೀಗೆ ಅಫ್ಘಾನ್ನಿಂದ ಸೇನೆ ವಾಪಾಸ್ಸಾಗುತ್ತಿದ್ದಂತೆ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸೋದಾಗಿ ತಿಳಿಸಿದ್ರು.. ಇದು ಇಡೀ ಜಗತ್ತಿನ ಚಿತ್ತ ವಿಶ್ವದ ದೊಡ್ಡಣ್ಣನ ಮೇಲೆ ನೆಡುವ ಹಾಗೆ ಮಾಡಿತ್ತು.. ಸದ್ಯ ಅಮೆರಿಕಾದ ವಾಪಸ್ಸಾತಿ ಬಗ್ಗೆ ವಿಶ್ವದ ದೊಡ್ಡಣ್ಣ ಮಾತಾಡ್ಡಿದ್ದು, ಅಫ್ಘಾನ್ ಮತ್ತು ಅಮೆರಿಕಾದ ಸುಧೀರ್ಘ ಯುದ್ಧ ಇಲ್ಲಿಗೆ ಅಂತ್ಯವಾಗಿದೆ ಎಂದಿದ್ದಾರೆ.
ಅಫ್ಘಾನಿಸ್ತಾನದೊಂದಿಗಿನ ನಮ್ಮ ಯುದ್ಧ ಇಲ್ಲಿಗೆ ಮುಗಿದಿದೆ. ಈ ಯುದ್ಧವನ್ನ ಅಂತ್ಯಗೊಳಿಸೋ ಸವಾಲು ಎದುರಿಸಿದ ನಾಲ್ಕನೇ ಅಧ್ಯಕ್ಷ ನಾನು. ನಾನು ಅಮೆರಿಕಾ ಅಧ್ಯಕ್ಷನಾದ ವೇಳೆ ಈ ಯುದ್ಧವನ್ನ ಕೊನೆಗೊಳಿಸೋದಾಗಿ ಮಾತು ಕೊಟ್ಟಿದ್ದೆ. ಇವತ್ತಿಗೆ ಆ ಮಾತನ್ನು ನಾನು ಪೂರ್ಣಗೊಳಿಸಿದ್ದೇನೆ.
ಅಫ್ಘಾನ್ನಿಂದ ಅಮೆರಿಕಾ ಸೇನೆಯ ವಾಪಾಸ್ಸಾತಿ ಬಳಿಕ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಆಡಿದ ಮಾತುಗಳಿವು. ಅಮೆರಿಕಾ ಮತ್ತು ಅಫ್ಘಾನ್ ನಡುವಿನ ಸುದೀರ್ಘ ಯುದ್ಧ ಅಂತ್ಯಗೊಂಡಿರೋದಾಗಿ ಬೈಡನ್ ಹೇಳಿದ್ದಾರೆ. ಹಾಗಂತ ಇಲ್ಲಿಗೆ ಎಲ್ಲವೂ ಮುಗೀತು ಅಂತಲ್ಲಾ. ಇನ್ನು ಮುಂದೆಯೂ ಉಗ್ರರ ವಿರುದ್ಧ ನಮ್ಮ ಹೋರಾಟ ಇರಲಿದೆ ಅಂತಾ ಬೈಡನ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಉಗ್ರರ ವಿರುದ್ಧದ ನಮ್ಮ ಹೋರಾಟ ಮುಂದವರಿಯಲಿದೆ. ಆದ್ರೆ, ಆಯಾ ದೇಶದಲ್ಲಿದ್ದುಕೊಂಡೇ ಉಗ್ರರ ವಿರುದ್ಧ ಹೋರಾಡುವ ಅಗತ್ಯವಿಲ್ಲ. ಹೊರಗಿದ್ದುಕೊಂಡೇ ನಾವು ಹೋರಾಡಬಲ್ಲೆವು. ಕಳೆದ ವಾರವಷ್ಟೇ ಈ ಸಾಮರ್ಥ್ಯವನ್ನ ನಾವು ತೋರಿದ್ದೇವೆ.
ಇನ್ನು, 13 ಅಮೆರಿಕಾ ಯೋಧರ ಸಾವಿಗೆ ಕಾರಣವಾಗಿದ್ದ ಐಸಿಸ್-ಕೆ ವಿರುದ್ಧ ಸಮರ ಸಾರೋ ಸುಳಿವನ್ನ ಬೈಡನ್ ನೀಡಿದ್ದಾರೆ. ನೇರಾನೇರ ಐಸಿಸ್-ಕೆ ಉಗ್ರರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.
ಐಸಿಸ್-ಕೆ.. ಕೇಳಿಸಿಕೊಳ್ಳಿ ನಿಮ್ಮ ವಿಚಾರದಲ್ಲಿ ಇನ್ನೂ ನಮ್ಮ ಹೋರಾಟ ಮುಗಿದಿಲ್ಲ. ಕಮಾಂಡರ್ ಇನ್ ಚೀಫ್ ನನಗೆ ನಮ್ಮ ಸೇನೆ, ಭದ್ರತೆ ಬಗ್ಗೆ ನಂಬಿಕೆ ಇದೆ. ಕಠಿಣ, ಕ್ಷಮಿಸದ, ಉದ್ದೇಶಿತ, ನಿಖರವಾದ ಕಾರ್ಯತಂತ್ರ ಹೆಣೆಯಲಿದೆ.
ಹೀಗೆ ತಮ್ಮ ಸಾಮರ್ಥ್ಯದ ಬಗ್ಗೆ ಮಾತು ಮುಂದುವರಿಸಿದ ಬೈಡನ್, ಅಫ್ಘಾನ್ನಿಂದ ಅಮೆರಿಕಾ ಸೇನೆಯನ್ನ ಹಿಂಪಡೆದ ತನ್ನ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ.. ಇದು ನಾನು ಕೈಗೊಂಡಿರೋ ಉತ್ತಮ ನಿರ್ಧಾರವಾಗಿದ್ದು, ಈ ನಿರ್ಧಾರದ ಹೊಣೆಯನ್ನನಾನೇ ಹೊರುತ್ತೇನೆ ಅಂತಾ ಹೇಳಿದ್ದಾರೆ.
ಹೀಗೆ ಜೋ ಬೈಡನ್ ಇದು ಐತಿಹಾಸಿಕ ನಿರ್ಧಾರ ಅಂತಾ ಹೇಳಿದ್ರೆ, ಅಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೊಂದು ಕೆಟ್ಟ ನಿರ್ಧಾರ ಅಂತಾ ಟೀಕಿಸಿದ್ದಾರೆ.
ಸಾಕಷ್ಟು ಸಾವು ನೋವಿನ ಬಳಿಕ ಕೊನೆಗೂ ಅಮೆರಿಕಾ ಸೇನೆ ಅಫ್ಘಾನ್ನಿಂದ ವಾಪಾಸ್ಸಾಗಿದೆ. ಹಾಗಂತ ಇಲ್ಲಿಗೆ ಎಲ್ಲವೂ ಮುಗಿದಿಲ್ಲ, ಉಗ್ರ್ರರ ವಿರುದ್ಧದ ನಮ್ಮ ಹೋರಾಟ ಮುಂದಿವರಿಯಲಿದೆ ಅಂತಾ ಬೈಡನ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಆದ್ರೆ ತಾಲಿಬಾನ್ ಕೈ ಸೇರಿರೋ ಅಫ್ಘಾನ್ನಲ್ಲಿ ಇನ್ನು ಏನೇನೆಲ್ಲಾ ಸಂಭವಿಸುತ್ತೋ?




