Wednesday, July 22, 2026
spot_imgspot_img
spot_imgspot_img

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಮರಣ ಆತ್ಮಹತ್ಯೆಯಲ್ಲ, ಆತನ ಕತ್ತುಹಿಸುಕಲಾಗಿದೆ: ಮರಣೋತ್ತರ ಪರೀಕ್ಷೆಯಿಂದ ವೈದ್ಯರ ಹೇಳಿಕೆ

- Advertisement -
- Advertisement -

ಎಪ್ಸ್ಟೀನ್ ಮೃತಪಟ್ಟ ರಾತ್ರಿ ಆತನ ಸೆಲ್ ಬಳಿಯಿದ್ದ ವ್ಯಕ್ತಿ ಯಾರು?
ನ್ಯೂಯಾರ್ಕ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ 2019ರಲ್ಲಿ ನ್ಯೂಯಾರ್ಕ್ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣದ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಆತ್ಮಹತ್ಯೆ ಎಂದು ಘೋಷಿಸಲಾಗಿದ್ದ ಆತನ ಮೃತ್ಯುವಿನ ಅಧಿಕೃತ ವರದಿಯ ಕುರಿತು ವರ್ಷಗಳ ಬಳಿಕವೂ ಅನುಮಾನಗಳು ಮುಂದುವರಿದಿವೆ.

ಎಪ್ಸ್ಟೀನ್ ನ ಮರಣೋತ್ತರ ಪರೀಕ್ಷೆಯನ್ನು ಕುಟುಂಬದ ಪರವಾಗಿ ವೀಕ್ಷಿಸಿದ್ದ ವಿಧಿವಿಜ್ಞಾನ ರೋಗಶಾಸ್ತ್ರಜ್ಞ ಡಾ. ಮೈಕೆಲ್ ಬಾಡೆನ್, ಆತ್ಮಹತ್ಯೆ ವರದಿಯ ಬಗ್ಗೆ ತಮ್ಮ ಅನುಮಾನವನ್ನು ಪುನರುಚ್ಚರಿಸಿದ್ದಾರೆ. ದಿ.ಟೆಲಿಗ್ರಾಫ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ಎಪ್ಸ್ಟೀನ್ ನೇಣು ಹಾಕಿಕೊಂಡು ಮೃತಪಟ್ಟಿಲ್ಲ; ಕತ್ತು ಹಿಸುಕಿದ ಪರಿಣಾಮ ಸಾವನ್ನಪ್ಪಿದ್ದಾನೆ” ಎಂದು ಹೇಳಿದ್ದಾರೆ. “ಈಗ ಲಭ್ಯವಿರುವ ಎಲ್ಲಾ ವಿವರಗಳನ್ನು ಸಮಗ್ರವಾಗಿ ಪರಿಗಣಿಸಿದರೆ, ಸಾವಿನ ನಿಖರ ಕಾರಣ ಮತ್ತು ಅದು ಸಂಭವಿಸಿದ ರೀತಿಯ ಕುರಿತು ಇನ್ನಷ್ಟು ಆಳವಾದ ಹಾಗೂ ಸ್ವತಂತ್ರ ತನಿಖೆ ನಡೆಸುವುದು ಅಗತ್ಯವೆಂದು ತೋರುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲೈಂಗಿಕ ಕಳ್ಳಸಾಗಣೆ ಆರೋಪದ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ ವೇಳೆ ಎಪ್ಸ್ಟೀನ್ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ನ್ಯೂಯಾರ್ಕ್ ವೈದ್ಯಕೀಯ ಪರೀಕ್ಷಕರ ಕಚೇರಿ ಇದನ್ನು ನೇಣು ಬಿಗಿದುಕೊಂಡು ಆತ್ಮಹತ್ಯೆ ಎಂದು ಘೋಷಿಸಿತ್ತು. ಬಾಡೆನ್ ಸ್ವತಃ ಶವಪರೀಕ್ಷೆ ನಡೆಸದಿದ್ದರೂ ವೀಕ್ಷಕರಾಗಿ ಹಾಜರಿದ್ದರು. ಪರೀಕ್ಷೆಯ ವೇಳೆ ಸಾವಿನ ನಿಖರ ಕಾರಣ ನಿರ್ಧರಿಸಲು ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದು ತಾವು ಹಾಗೂ ವೈದ್ಯಕೀಯ ಪರೀಕ್ಷಕರು ಕಂಡುಕೊಂಡಿದ್ದೆವು ಎಂದು ಬಾಡೆನ್ ತಿಳಿಸಿದ್ದಾರೆ.

2019ರಲ್ಲಿ ತಮ್ಮ ವೃತ್ತಿಪರ ತೀರ್ಮಾನವನ್ನು “ಅನಿರ್ದಿಷ್ಟ” ಎಂದು ಬಾಡೆನ್ ವಿವರಿಸಿದ್ದರು. ಇನ್ನೂ ಹೆಚ್ಚಿನ ಪರೀಕ್ಷೆ ಅಗತ್ಯವಿದೆ ಎಂದು ಬಾಕಿಯಿಟ್ಟಿದ್ದರೂ ಕೇವಲ ಐದು ದಿನಗಳಲ್ಲೇ ಆಗಿನ ಮುಖ್ಯ ವೈದ್ಯಕೀಯ ಪರೀಕ್ಷಕ ಡಾ. ಬಾರ್ಬರಾ ಸ್ಯಾಂಪ್ಸನ್ ಮರಣ ಪ್ರಮಾಣಪತ್ರದಲ್ಲಿ ಆತ್ಮಹತ್ಯೆ ಎಂದು ದಾಖಲಿಸಿದ್ದರು. ಸ್ಯಾಂಪ್ಸನ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಮರಣೋತ್ತರ ಪರೀಕ್ಷೆಯ ವೇಳೆ ತಾನು ಹಾಜರಿರಲಿಲ್ಲ ಎಂದು ಬಾಡೆನ್ ತಿಳಿಸಿದ್ದಾರೆ.

ಅಧಿಕೃತ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಎಪ್ಸ್ಟೀನ್ ನ ಕುತ್ತಿಗೆಯಲ್ಲಿ ಮೂರು ಮುರಿತಗಳು ದಾಖಲಾಗಿದ್ದವು. ಥೈರಾಯ್ಡ್ ಕಾರ್ಟಿಲೇಜ್ ಮೇಲೆ ಎರಡು ಮುರಿತ ಕಂಡು ಬಂದಿತ್ತು. “ನನ್ನ 50 ವರ್ಷದ ವೃತ್ತಿಜೀವನದಲ್ಲಿ ನ್ಯೂಯಾರ್ಕ್ ಜೈಲಿನ ಖೈದಿಗಳನ್ನು ಸೇರಿದಂತೆ, ನೇಣು ಬಿಗಿದುಕೊಂಡ ಆತ್ಮಹತ್ಯೆ ಪ್ರಕರಣದಲ್ಲಿ ಮೂರು ಕುತ್ತಿಗೆ ಮುರಿತಗಳನ್ನು ನೋಡಿಲ್ಲ” ಎಂದು ಬಾಡೆನ್ ಹೇಳಿದ್ದಾರೆ.

2019ರಲ್ಲಿ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲೂ “ಸಾಕ್ಷ್ಯವು ಆತ್ಮಹತ್ಯೆಗಿಂತ ಕೊಲೆಯೆಂದು ಸೂಚಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಎಪ್ಸ್ಟೀನ್ ನ ವಕೀಲರೂ ವೈದ್ಯಕೀಯ ಪರೀಕ್ಷಕರ ತೀರ್ಮಾನಗಳಿಂದ ತೃಪ್ತರಾಗಿಲ್ಲ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಮೆಟ್ರೋಪಾಲಿಟನ್ ಜೈಲು ಕೇಂದ್ರದಲ್ಲಿನ ಭದ್ರತಾ ಲೋಪಗಳು ಪ್ರಕರಣದ ಮೇಲೆ ಮತ್ತಷ್ಟು ಅನುಮಾನ ಹುಟ್ಟಿಸಿವೆ.

ನ್ಯೂಯಾರ್ಕ್‌ ಮೂಲದ ಡೈಲಿ ಎಕ್ಸ್‌ಪ್ರೆಸ್ ಯುಎಸ್ ವರದಿ ಪ್ರಕಾರ, 2023ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯ ಪರಿಶೀಲನಾ ವರದಿ ಜೈಲು ಸೌಲಭ್ಯದಲ್ಲಿ ಹಲವಾರು ಗಂಭೀರ ಲೋಪಗಳನ್ನು ಎತ್ತಿ ತೋರಿಸಿದೆ. ಎಪ್ಸ್ಟೀನ್‌ನ ಸೆಲ್‌ನಲ್ಲಿ ಹೆಚ್ಚುವರಿ ಕಂಬಳಿಗಳು, ಲಿನಿನ್‌ ಗಳು ಹಾಗೂ ಬಟ್ಟೆಗಳು ಇದ್ದವು. ಅವುಗಳಲ್ಲಿ ಕೆಲವು ಹಗ್ಗದಂತಿರುವ ಪಟ್ಟಿಗಳಂತೆ ಹರಿದು ಹೋಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಸೆಲ್‌ನ ನಿಯಮಿತ ತಪಾಸಣೆಗಳು ಸರಿಯಾಗಿ ನಡೆಯಲಿಲ್ಲ ಅಥವಾ ಅವುಗಳ ದಾಖಲಾತಿ ಸಮರ್ಪಕವಾಗಿರಲಿಲ್ಲ ಎಂಬುದನ್ನೂ ವರದಿ ಸೂಚಿಸಿದೆ.

ಆಗಸ್ಟ್‌ 9, 2019ರಂದು ಎಪ್ಸ್ಟೀನ್ ನ ಸಾವಿಗೆ ಒಂದು ದಿನ ಮೊದಲು ಎಪ್ಸ್ಟೀನ್‌ನ ಸೆಲ್‌ ನಲ್ಲಿದ್ದ ಸಹ ಕೈದಿಯನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಅವರ ಬದಲಿಗೆ ಯಾರನ್ನೂ ನಿಯೋಜಿಸಲಾಗಿರಲಿಲ್ಲ. ರಾತ್ರಿ 8 ಗಂಟೆಯ ಸೆಲ್ ಲಾಕ್ ಮಾಡಿದ ನಂತರ ಕಡ್ಡಾಯವಾಗಿದ್ದ ಪ್ರತಿ 30 ನಿಮಿಷಗಳ ಆರೋಗ್ಯ ತಪಾಸಣೆಗಳನ್ನು ಸುಮಾರು ರಾತ್ರಿ 10.40 ಬಳಿಕ ನಡೆಸಲಾಗಿಲ್ಲ ಎಂದು ಸಿಬಿಎಸ್ ಹೊಸದಾಗಿ ಬಿಡುಗಡೆಯಾದ ವೀಡಿಯೊ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ನಂತರ ತಪಾಸಣೆ ನಡೆಸಲಾಗಿದೆ ತೋರಿಸಲು ಸಿಬ್ಬಂದಿ ದಾಖಲೆಗಳನ್ನು ತಿದ್ದಿರುವುದು ಬಹಿರಂಗವಾಗಿದೆ.

ಮರುದಿನ ಬೆಳಿಗ್ಗೆ ಇಬ್ಬರು ಗಾರ್ಡ್‌ಗಳು ಎಪ್ಸ್ಟೀನ್ ನನ್ನು ನಿಶ್ಚಲ ಸ್ಥಿತಿಯಲ್ಲಿ ಕಂಡರು. ಆತನ ದೇಹವು ನೆಲದಿಂದ ಸ್ವಲ್ಪ ಮೇಲಿರುವಂತೆ, ಬಹುತೇಕ ಕುಳಿತ ಸ್ಥಿತಿಯಲ್ಲಿ ಮೇಲಿನ ಹಾಸಿಗೆಯಿಂದ ನೇತಾಡುತ್ತಿತ್ತು. ಬಟ್ಟೆ ಅಥವಾ ಹಾಸಿಗೆಯಿಂದ ಹರಿದಿದ್ದ ಕಿತ್ತಳೆ ಬಣ್ಣದ ಪಟ್ಟಿಯೊಂದು ಆತನ ಕುತ್ತಿಗೆಯ ಸುತ್ತಲೂ ಇತ್ತು. ಆಸ್ಪತ್ರೆಗೆ ಸಾಗಿಸುವ ಮೊದಲು ಕಾವಲುಗಾರರು ಆ ಪಟ್ಟಿಯನ್ನು ತೆಗೆದು ಸಿಪಿಆರ್‌ ಮಾಡಲು ಪ್ರಯತ್ನಿಸಿದರು. ಬಳಿಕ ವೈದ್ಯರು ಎಪ್ಸ್ಟೀನ್ ಮೃತಪಟ್ಟಿದ್ದಾನೆಂದು ಘೋಷಿಸಿದರು.

ನಂತರ ಇಬ್ಬರು ಭದ್ರತಾ ಗಾರ್ಡ್‌ಗಳ ವಿರುದ್ಧ ದಾಖಲೆಗಳನ್ನು ಕೃತಕವಾಗಿ ತಿದ್ದುಪಡಿ ಮಾಡಿದ ಆರೋಪ ದಾಖಲಿಸಲಾಯಿತು. ಆದರೆ, ನ್ಯಾಯಾಂಗ ಇಲಾಖೆಯ ಪರಿಶೀಲನೆಯ ನಂತರ ಬಿಡುಗಡೆಗೊಂಡ ವೀಡಿಯೊ ದೃಶ್ಯಗಳಲ್ಲಿ ಆಗಸ್ಟ್‌ 9ರ ರಾತ್ರಿ 10.39ಕ್ಕೆ ಎಪ್ಸ್ಟೀನ್‌ನ ಪ್ರತ್ಯೇಕ ವಿಭಾಗದ ಮಹಡಿಯಲ್ಲಿ “ಕಿತ್ತಳೆ ಬಣ್ಣದ ಮಿಂಚು” ಹಾದುಹೋಗಿರುವಂಥ ಅಸ್ಪಷ್ಟ ಚಲನವಲನ ಕಂಡುಬಂದಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.

ಎಫ್‌ಬಿಐ ಮೆಮೊದಲ್ಲಿ ಅದನ್ನು “ಬಹುಶಃ ಕೈದಿ” ಎಂದು ವಿವರಿಸಲಾಗಿದ್ದರೆ, ಇನ್ಸ್‌ಪೆಕ್ಟರ್ ಜನರಲ್ ವರದಿಯಲ್ಲಿ ಅದನ್ನು ಕಿತ್ತಳೆ ಬಣ್ಣದ ಲಿನಿನ್ ಅಥವಾ ಹಾಸಿಗೆಯನ್ನು ಹೊತ್ತ ಗುರುತಿಸಲಾಗದ ಅಧಿಕಾರಿ ಎಂದು ಗುರುತಿಸಲಾಗಿದೆ. ಇನ್ನೊಂದೆಡೆ, ಆಗಿನ ಅಟಾರ್ನಿ ಜನರಲ್ ಬಿಲ್ ಬಾರ್ “ಆ ರಾತ್ರಿ ಆ ವಿಭಾಗಕ್ಕೆ ಯಾರೂ ಪ್ರವೇಶಿಸಿಲ್ಲ” ಎಂದು ಹೇಳಿಕೆ ನೀಡಿದ್ದರು.

ಆದರೆ ಸಿಬಿಎಸ್ ನಡೆಸಿದ ಸ್ವತಂತ್ರ ವೀಡಿಯೊ ವಿಶ್ಲೇಷಣೆ, ಆ ಚಲನವಲನವು ಕಿತ್ತಳೆ ಬಣ್ಣದ ಜೈಲಿನ ಉಡುಪಿನಲ್ಲಿದ್ದ ವ್ಯಕ್ತಿ ಎಂದು ಹೆಚ್ಚು ಹೊಂದಿಕೆಯಾಗುತ್ತದೆ ಎಂದು ಸೂಚಿಸಿದೆ. ಆ ಸಮಯದಲ್ಲಿ ಕೈದಿಗೆ ಬೆಂಗಾವಲು ನೀಡುವುದು ಅಸಾಮಾನ್ಯವಾಗುತ್ತಿತ್ತು ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ.

ಡಾ. ಬಾಡೆನ್ ಮತ್ತೆ ಆಳವಾದ ತನಿಖೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಒಂದು ಕಾಲದಲ್ಲಿ ಮುಚ್ಚಿದಂತೆ ಕಂಡಿದ್ದ ಈ ಪ್ರಕರಣ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಅಂತಿಮ ಸತ್ಯ ಹೊರಬರುವುದೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ.

- Advertisement -

Related news

error: Content is protected !!