ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಆಶ್ರಯದಲ್ಲಿ ವಿಟ್ಲದ ಅನಂತ ಸದನದಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಾಗವಹಿಸುವುದು ನಿಷೇಧಿಸಿ ಸಾಂಕೇತಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ.


ದೇಶದೆಲ್ಲೆಡೆ ಕೊರೋನ ಎಂಬ ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹತೋಟಿಗೆ ಬಾರದಿರುವುದರಿಂದ ಈ ವರ್ಷದ ಪೂಜೆಯಲ್ಲಿ ಸಾರ್ವಜನಿಕವಾಗಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.
ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ, ಮಾನ್ಯ ಜಿಲ್ಲಾಧಿಕಾರಿಯವರ ಆದೇಶವನ್ನು ಗೌರವಿಸಿ ನಮ್ಮ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಒಂದೆಡೆ ಸೇರುವುದರಿಂದ ಸೋಂಕು ಹರಡುವಿಕೆ ಹೆಚ್ಚುವ ಸಂಭವವಿದೆ. ಆದ್ದರಿಂದ ಸಾಂಪ್ರದಾಯಿಕ ಪೂಜೆಯನ್ನು ಸಾಂಕೇತಿಕವಾಗಿ ಮಾಡಿ, ಸಾರ್ವಜನಿಕರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ.

ಆ ಪ್ರಯುಕ್ತ ವರ್ಷಂಪ್ರತಿ ಪೂಜೆಯಲ್ಲಿ ಭಾಗವಹಿಸುತ್ತಿದ್ದ ಭಕ್ತಾದಿಗಳೆಲ್ಲರೂ ಈ ಬಾರಿ ಜುಲೈ 31ರ ಶುಕ್ರವಾರ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದು, ಶ್ರದ್ಧಾ ಭಕ್ತಿಯಿಂದ, ದೇವೀ ಸ್ತುತಿಯನ್ನು ಪಠಿಸಿ, ದೀಪದ ಸುತ್ತಲೂ ಅಲಂಕರಿಸಿ ಸಂಜೆ 6.00 ಗಂಟೆಗೆ 108 ಬಾರಿ ಕುಂಕುಮಾರ್ಚನೆ ಮಾಡುವ ಮುಖಾಂತರ ಪೂಜಿಸಿ, ಅತೀ ಶೀಘ್ರವಾಗಿ ಕೊರೋನ ಎಂಬ ಸಾಂಕ್ರಾಮಿಕ ರೋಗವು ವಿಶ್ವದಿಂದಲೇ ದೂರವಾಗಲೆಂದು ಪ್ರಾರ್ಥಿಸಿಕೊಳ್ಳಬೇಕೆಂದು ವಿಟ್ಲ ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ.
