




ವಿಟ್ಲ : ಶಿಕ್ಷಕಿಯರಿಬ್ಬರ ಒಣ ಪ್ರತಿಷ್ಠೆ ಮತ್ತು ಒಳಜಗಳದಿಂದಾಗಿ ಕನ್ಯಾನ ಗ್ರಾಮದ ಕಣಿಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಂತಾಗಿದೆ. ನಲ್ವತ್ತಾರು ವಿದ್ಯಾರ್ಥಿಗಳಿರುವ ಕಣಿಯೂರು ಸರ್ಕಾರಿ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದಾರೆ. ಇಪ್ಪತ್ತಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನಿತಾ ಎಂಬವರು ಮುಖ್ಯ ಶಿಕ್ಷಕಿಯಾಗಿದ್ದಾರೆ.
ಏಳೆಂಟು ವರ್ಷಗಳಿಂದ ಲವಿನಾ ಎಂಬವರು ಸಹಾಯಕ ಶಿಕ್ಷಕಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಸನ ಮೂಲದ ಸುಮಯ್ಯ ಎಂಬವರು ಇದೇ ಕಣಿಯೂರು ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ಶಿಕ್ಷಕಿ ಸುಮಯ್ಯಗೂ ಮುಖ್ಯ ಶಿಕ್ಷಕಿ ಅನಿತಾ ಅವರಿಗೂ ಸಣ್ಣಪುಟ್ಟ ವಿಚಾರಗಳಲ್ಲಿ ಮನಸ್ತಾಪ ಹುಟ್ಟಿಕೊಂಡು ದಿನಗಳೆದಂತೆ ಹಾವು-ಮುಂಗುಸಿಯಂತೆ ಕಾದಾಟಕ್ಕಿಳಿದರೆಂದು ಪೋಷಕರು ಆರೋಪಿಸುತ್ತಿದ್ದಾರೆ. ಇದೇ ಕಾದಾಟ ದಿನದಿಂದ ದಿನಕ್ಕೆ ಬೆಳೆಯಲು ಮತ್ತೋರ್ವ ಶಿಕ್ಷಕಿಯಾಗಿರುವ ಲವಿನಾ ಅವರ ಕುಮ್ಮಕ್ಕು ಕಾರಣವೆಂಬುದು ಪೋಷಕರ ನೇರ ಆರೋಪವಾಗಿದೆ. ಶಿಕ್ಷಕಿಯರಿಬ್ಬರ ಒಣ ಪ್ರತಿಷ್ಟೆಯಿಂದ ರೋಸಿ ಹೋದ ವಿದ್ಯಾರ್ಥಿಗಳು ಪ್ರತಿನಿತ್ಯ ಪೋಷಕರಲ್ಲಿ ಕಣ್ಣೀರಿಡಲು ಆರಂಭಿಸಿದ್ದರು. ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೋಂಡ ಪೋಷಕರು ಪದೇ ಪದೇ ಶಾಲೆಗೆ ಬಂದು ಶಿಕ್ಷಕಿಯರನ್ನು ತರಾಟೆಗೆ ತೆಗೆದು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಮಧ್ಯೆ ಮುಖ್ಯ ಶಿಕ್ಷಕಿ ಅನಿತಾ ಅವರು ಒಂದಿಷ್ಟು ಒತ್ತಡ ಬಳಸಿ ವಿಟ್ಲ ಸಮೀಪದ ಕೆಲಿಂಜ ಶಾಲೆಗೆ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ಹಾಕಿಸುವಲ್ಲಿ ಯಶಸ್ವಿಯಾದರು. ಮತ್ತೋರ್ವ ಶಿಕ್ಷಕಿ ಲವಿನಾ ಎಂಬವರು ಮನೆ ನಿರ್ಮಾಣದ ನೆಪದಲ್ಲಿ ಒಂದು ತಿಂಗಳ ರಜೆ ಪಡೆದು ತೆಪ್ಪಗಾದರು. ಇದರಿಂದಾಗಿ ನಲುವತ್ತಾರು ಮಕ್ಕಳನ್ನು ಸುಮಯ್ಯ ಎಂಬ ಶಿಕ್ಷಕಿಯೊಬ್ಬರೇ ನೋಡಿಕೊಳ್ಳುವಂತಾಗಿದೆ. ಶಿಕ್ಷಕಿಯರ ದೊಂಬರಾಟದಿಂದ ರೋಸಿಹೋದ ಪೋಷಕರು ಎರಡು ತಿಂಗಳಿಂದ ಶಿಕ್ಷಣಾಧಿಕಾರಿಗೆ ಪದೇ ಪದೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ಪೋಷಕರು ಶುಕ್ರವಾರದಂದು ಶಾಲೆಯಲ್ಲಿ ಜಮಾಯಿಸುವ ಬಗ್ಗೆ ಶಿಕ್ಷಣಾಧಿಕಾರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಬಂಟ್ವಾಳ ಶಿಕ್ಷಣಾಧಿಕಾರಿಯವರು ನಾಲ್ವರು ಸಿಬ್ಬಂದಿಗಳನ್ನು ಮತ್ತು ಸಿ.ಆರ್.ಪಿ.ಯವರನ್ನು ಕಣಿಯೂರು ಶಾಲೆಗೆ ಕಳುಹಿಸಿದ್ದರು. ಅಧಿಕಾರಿಗಳು ಬಂದಿರುವ ಮಾಹಿತಿ ಪಡೆದ ಪೋಷಕರು ಶಾಲೆಗೆ ತೆರಳಿ ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಭೆ ಸೇರಿದ ಪೋಷಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲೇ ಶಿಕ್ಷಕಿಯರಿಬ್ಬರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿ ಝಾಡಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾದಾಟ ನಡೆಸುತ್ತಿದ್ದ ಮುಖ್ಯ ಶಿಕ್ಷಕಿ ಅನಿತಾ ಮತ್ತು ಸಹಾಯಕ ಶಿಕ್ಷಕಿ ಸುಮಯ್ಯರನ್ನು ತರಾಟೆಗೆ ತೆಗೆದುಕಕೊಳ್ಳುವ ಮೂಲಕ ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪೋಷಕರ ಆಕ್ರೋಶದ ಮುಂದೆ ಅಧಿಕಾರಿಗಳ ಮಾತಿಗೆ ಬೆಲೆಯೇ ಇಲ್ಲದಂತಾಗಿತ್ತು. ಅಂತಿಮವಾಗಿ ಇಬ್ಬರು ಶಿಕ್ಷಕಿಯರಿಗೂ ಅಧಿಕಾರಿಗಳ ತಂಡ ಸಾಕಷ್ಟು ಬುದ್ಧಿ ಮಾತು ಹೇಳಿ ಹತ್ತುದಿನಗಳ ಕಾಲಾವಕಾಶ ನೀಡಿದೆ. ಮತ್ತೆ ಕಾದಾಟ ಮುಂದುವರಿದಲ್ಲಿ ಇಬ್ಬರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಒತ್ತಾಯದ ಮೇರೆಗೆ ಇಬ್ಬರು ಶಿಕ್ಷಕಿಯರೂ ಪಶ್ಚಾತ್ತಾಪ ವ್ಯಕ್ತಪಡಿಸಿ ಇನ್ನು ಮುಂದಕ್ಕೆ ಕಾದಾಟ ನಡೆಸದೇ ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತೇವೆಂದು ಬರಹ ಮೂಲಕ ಆಶ್ವಾಸನೆ ನೀಡಿದ್ದಾರೆ. ಇನ್ನಾದರೂ ಕಣಿಯೂರು ಸರ್ಕಾರಿ ಶಾಲೆ ಉತ್ತಮ ರೀತಿಯಲ್ಲಿ ನಡೆಯಲಿ ಎಂಬುದು ವಿದ್ಯಾಭಿಮಾನಿಗಳ ಆಶಯವಾಗಿದೆ.