Friday, April 19, 2024
spot_imgspot_img
spot_imgspot_img

ವಿಟ್ಲ: ಕುಲಾಲರ ಕನಸಿನ ಭವನದ ಲೋಕಾರ್ಪಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಕುಂಬಾರ, ಕುಲಾಲ, ಮೂಲ್ಯಣ್ಣ, ಮುಂತಾದ ಹೆಸರುಗಳಿಂದ ಕರಾವಳಿ ಭಾಗದಲ್ಲಿ ಕರೆಯಲ್ಪಡುವ ಮೆದು ಮಣ್ಣಿನಂತೆ ಸರ್ವವನ್ನು ಸ್ವೀಕರಿಸಿ, ಬೇಕಾದವರಿಗೆ ಬೇಕಾದ ಹಾಗೆ ಹಿಗ್ಗಿ ಕುಗ್ಗಿ ಬದುಕುವ ಮೃದು ಮನಸ್ಸಿನವರು ಕುಲಾಲರು. ಸಾಮರ್ಥ್ಯ ವಿದ್ದರೂ ಚಂದ್ರನಂತೆ ಇನ್ನೊಂದು ಧೈರ್ಯದ ಬೆಳಕಿಗೆ ಕಾಯುವ ಉದಾರಿಗಳು. ಕ್ಷೇತ್ರ ಯಾವುದೇ ಇರಲಿ ಮುಂಚೂಣಿಯಲ್ಲಿ ಉಳ್ಳವರು. ದೇವ, ದೈವ ಸೇವೆಯಲ್ಲಿ ಅತಿ ಸಾಮಿಪ್ಯತೆ ಹೊಂದಿದವರು.ಅದಕ್ಕಿನ್ನೂ ಸೇವಕರಾಗಿಯೇ ದುಡಿವವರು ಮತ್ತು ಅಷ್ಟರಲ್ಲೇ ತೃಪ್ತಿ ಕಂಡವರು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ ಎಂಬುದರ ಅಪ್ಪಟ ನಂಬಿಕಸ್ತರು, ಅತಿಥಿ ದೇವೋಭವ ಎಂಬಂತೆ ಅನ್ಯರಿಗೆ ಮಣೆ ಕೊಟ್ಟವರು, ಜೋಪಾನವೆಂಬುದು ಕೈಯಲ್ಲೂ ಹೃದಯದಲ್ಲೂ ಮೆಟ್ಟಿಕೊಂಡವರು. ಹುಟ್ಟಿಗೂ, ಜೀವನಕ್ಕೂ, ಸಾವಿಗೂ ಅಮೂಲ್ಯ ಆಶ್ರಯ ನೀಡುವ ಅಪ್ಪಟ ಮಣ್ಣಿನರಾಧಕ ಮೂಲ್ಯಣ್ಣ .

ಪ್ರಸ್ತುತ ಸರ್ವ ಕ್ಷೇತ್ರದಲ್ಲೂ ಚಾಕಚಕ್ಯತೆಯನ್ನು ತೋರಿ ಗೆಲ್ಲುಗಳಲ್ಲಿ ರಾರಾಜಿಪ ಮೌನ ಜೀವಿ. ಬಂಟ್ವಾಳ ತಾಲೂಕಿನ ವಿಟ್ಲ ಫಿರ್ಕಾ ಇಂದು ಸುಮಾರು 30,000/-ಕ್ಕಿಂತಲೂ ಹೆಚ್ಚು ಕುಲಾಲ ಜನಸಂಖ್ಯೆ ಹೊಂದಿದ ಪ್ರದೇಶ. ವಿದ್ಯಾಭ್ಯಾಸ, ಕೃಷಿ, ಉನ್ನತ ಹುದ್ದೆ, ಆಟೋಟ, ಕಲಾ ಸಾಧನೆ ಹಾಗೂ ದೈವಾರಾಧನೆಯಲ್ಲಿ ಮೇಲ್ಪಂಕ್ತಿಯಲ್ಲಿರುವ ಸಮುದಾಯ ಸುಮಾರು 19 ಗ್ರಾಮಗಳನ್ನು ಹೊಂದಿ “ಕುಲಾಲ ಸಂಘ” ವಿಟ್ಲ, ವಿಟ್ಲ ಪರಿಸರದಲ್ಲಿ ಆರಂಭವನ್ನು ಕಂಡಿತು. ವರ್ಷಕ್ಕೊಂದು ಸತ್ಯನಾರಾಯಣ ಪೂಜೆ, ವಾರ್ಷಿಕೋತ್ಸವದ ವ್ಯಾಪ್ತಿಗೊಳಪಟ್ಟು ಕುಲಾಲ ಸಂಘಟನೆ ಕಾರ್ಯಚರಿಸಿತು. ಒಂದು ರೀತಿಯಲ್ಲಿ ವಿಟ್ಲದ ಮೂಲ ಸೌಕರ್ಯದ ಯೋಜಕ, VRC ಯ ಸಂಯೋಜಕ ರಮಾನಾಥ ವಿಟ್ಲ ಇದರ ಸ್ಥಾಪಕಾಧ್ಯಕ್ಷರಾಗಿ 1999-2000 ದಲ್ಲಿ ನೇಪಥ್ಯ ವಹಿಸಿದರು.

ಆರಂಭದಲ್ಲಿ ವಿಟ್ಲದ ಸದನಗಳಲ್ಲಿ ಸಂಘದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆ ಬಳಿಕ ಕಟ್ಟೆ ಸೇಸು ಮೂಲ್ಯ, ಚಂದಪ್ಪಾಡಿ ಕೃಷ್ಣಮೂಲ್ಯ, ಚಂದಪ್ಪಾಡಿ ಶಂಕರಮೂಲ್ಯ,ಕೋಡಿ ಗುಡ್ಡಪ್ಪ ಮೂಲ್ಯ, ಕೋಡಿ ನಾಗಪ್ಪ ಮೂಲ್ಯ, ಕಟ್ಟೆ ವೀರಪ್ಪ ಮೂಲ್ಯ, ವಿಟ್ಲ ಹೂವಯ್ಯ ಮೂಲ್ಯ, ಉರಿಮಜಲು ಸೇಸಪ್ಪ ಮೂಲ್ಯ, ವೆಂಕಪ್ಪ ಮೂಲ್ಯ ನೆತ್ರಕೆರೆ ಹೀಗೆ ಹಲವರ ಮುತುವರ್ಜಿ ಸಂಘಕ್ಕೊಂದು ನಿವೇಶನ ಒದಗಿಸಿತು. ಮಾಣಿಲ ಶ್ರೀಗಳವರ ಮಾರ್ಗದರ್ಶನ ವಿಟ್ಲ ಫಿರ್ಕದ ಕುಲಾಲ ಬಂಧುಗಳ ಒಡಂಬಡಿಕೆ ಸಂಘಕ್ಕೆ ಬಲ ಕೊಟ್ಟಿತು. ಯುವ ಜನರ ಹೊಸ ಯೋಜನೆಗಳು ಯೋಚನೆಗಳಾಗಿ 2014 ರಲ್ಲಿ ನಿವೇಶನದಲ್ಲಿ ಕಟ್ಟಡದ ಶಿಲಾನ್ಯಾಸ ಮಾಡಿತ್ತು. ಹಲವಾರು ನ್ಯೂನತೆಗಳು ಆಮೆಗತಿಯ ಪ್ರಗತಿಗೆ ಕಾರಣವಾಗಿ ಸಂಘದ 25ನೇ ವರ್ಷದ ಪಾದಾರ್ಪಣೆಗೆ ನೂತನ ಕಟ್ಟಡ “ರಜತ ಭವನ” ಸಿದ್ದವಾಗಿದೆ.

ದಿನಾಂಕ 24.02.2024ರಂದು ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರನ ಕೃಪೆ ಹಾಗೂ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಭವನವು ಶ್ರೀ ಉದಯೇಶ ಕೆದಿಲಾಯರ ಪೌರೋಹಿತ್ಯದಲ್ಲಿ ವಾಸ್ತು ಪೂಜೆ ಮತ್ತು ದಿನಾಂಕ 25.02.2024 ರಂದು ಬೆಳಿಗ್ಗೆ ಗಂಟೆ 8 ರಿಂದ ಭಜನಾ ಕಾರ್ಯಕ್ರಮ, ಗಣಹೋಮ, ಸತ್ಯನಾರಾಯಣ ಪೂಜೆ, ಹಾಗೂ ಶ್ರೀ ಸ್ವಾಮಿಗಳು ಮತ್ತು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ರವಿ ಯನ್. ನಡುಬೆಟ್ಟುರವರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ಉಪಸ್ಥಿತಿಯಲ್ಲಿ ಪ್ರಸ್ತುತ ಅಧ್ಯಕ್ಷರಾದ ಬಿ. ಕೆ ಬಾಬುರವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ವಜಾತಿ ಸಾಧಕರ ಸನ್ಮಾನ, ವಿದ್ಯಾರ್ಥಿ ಪುರಸ್ಕಾರಗಳೊಂದಿಗೆ ನಡೆಯಲಿರುವುದು. ಸಂಜೆ ಗಂಟೆ 6.00ಕ್ಕೆ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಜೇಸಿ ಫೆವಿಲಿಯನ್ನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ “ಬೆಳ್ಳಿಕುಂಭ” ಬಿಡುಗಡೆಗೊಳ್ಳಲಿದೆ. ಬಳಿಕ ಸಾರ್ವಜನಿಕರ ವೀಕ್ಷಣೆಗಾಗಿ ಪವನ ಕಲಾವಿದರು ಕುಡ್ಲ ಇವರಿಂದ “ತೂಯಿಲೆಕ ಅತ್ತ್ “ನಾಟಕ ಪ್ರದರ್ಶನಗೊಳ್ಳಲಿದೆ. ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಭಾವ ಮೈತಳೆದು ತಲೆಯೆತ್ತಿದ ಭವನ ಸಮಾಜಕ್ಕೆ ವಿನಿಯೋಗವಾಗಲಿ ಹಾಗೂ ಸಂಘದಿಂದ ಈ ಸಮುದಾಯದ ಬಾಂಧವರಿಗೆ ವಿದ್ಯಾಭ್ಯಾಸ, ಆರೋಗ್ಯ ಆಶ್ರಯ ನೀಡುವ ಧ್ಯೇಯೋದ್ದೇಶ ಹೊಂದಿದೆ.

- Advertisement -

Related news

error: Content is protected !!