ವಿಟ್ಲ: ” ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ” ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತದೆ. ಅಂದರೆ ದೇವರ ಸ್ವರೂಪ ಪಡೆಯುತ್ತದೆ. ಅರ್ಚಕರು ದೇವರು ಮತ್ತು ಭಕ್ತನ ನಡುವೆ ಸಂಬಂದ ಬೆಸೆಯುವ ಕೊಂಡಿ.

ದೇವರನ್ನು ಅಷ್ಟು ಹತ್ತಿರದಿಂದ ಆರಾಧಿಸುವ ಅವಕಾಶ ಪಡೆದವರು. ನಿತ್ಯ ಪೂಜೆಪುರಸ್ಕಾರಗಳಿಂದ ದೇವರಲ್ಲಿ ನಮಗೆ ಶ್ರಧ್ದೆಯನ್ನು ಮೂಡಿಸಿ, ನಿಷ್ಠೆ ಕಾಪಾಡಿಕೊಂಡು ಸದಾ ವ್ಯಕ್ತಿ, ಸಮಾಜದ ಏಳಿಗೆಗಾಗಿ ತನ್ನದೇ ರೀತಿಯಲ್ಲಿ ನಂಬುಗೆಯ ಪ್ರಾರ್ಥನೆ ಮಾಡಿದ ಅರ್ಚಕರು ಶ್ರೀ ಬಾಲಕೃಷ್ಣ ಕಾರಂತರು ಎಂದು ನಿವೃತ್ತ ಪ್ರಾಂಶುಪಾಲರು, ಊರ ಹಿರಿಯರು ಆದ ಡಾ||ಮಹಾಲಿಂಗ ಭಟ್ ಬಿಲ್ಲಂಪದವು ಅವರು ದಿನಾಂಕ 31.12.2020 ರಂದು ಎರುಂಬು ಶ್ರೀ ವಿಷ್ಣುಮಂಗಲ ದೇವಾಲಯದ ಅಖಂಡ ಭಜನೆ ಕಾರ್ಯಕ್ರಮದಲ್ಲಿ ಕಾರಂತರನ್ನು ಗೌರವಿಸುತ್ತ ಮಾತನಾಡಿದರು.

ಅಳಿಕೆ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಭಟ್ ಅವರು ಮಾತನಾಡುತ್ತ ಭಗವಂತ ಸರ್ವವ್ಯಾಪಿ, ಭಕ್ತರ ಇಷ್ಟಾರ್ಥ ನೆರವೇರುವುದಕ್ಕೆ ನಿಷ್ಕಲ್ಮಶ ಭಕ್ತಿ, ಸೇವೆ ಮುಖ್ಯ. ಈ ನಿಟ್ಟಿನಲ್ಲಿ ಕಾರಂತರ ಸೇವೆಯು ಸ್ತುತ್ಯರ್ಹ. ಇದಕ್ಕೆ ಸಾಕ್ಷಿ ಸನ್ಮಾನಿತರಿಗೆ ಈ ಪರಿಸರದ ಯುವಕರು ನೀಡಿರುವ ಗೌರವ. ಸದಾ ಅವಕಾಶಗಳು ದೊರೆತು ದೇವರ ಮತ್ತು ಭಕ್ತರ ನಡುವಿನ ಸಂಪರ್ಕದ ಸೇತುವಾಗಿ ಕಾರಂತರ ಸೇವೆ ನಿರಂತರವಾಗಿರಲಿ ಎಂದು ಪ್ರಶಂಸಿದರು.


ಸನ್ಮಾನ ಸ್ವೀಕರಿಸಿದ ಬಾಲಕೃಷ್ಣ ಕಾರಂತರು ಭಾವುಕರಾಗಿ ನನ್ನ ಕರ್ತವ್ಯ ಮಾತ್ರ ಮಾಡುತಿದ್ದೇನೆ ಇದು ಮರೆಯಲಾರದ ಕ್ಷಣ.ಎಂದು ನುಡಿದರು. ಅಳಿಕೆ ಶ್ರೀ ಯಶೋದರ ಬಂಗೇರ, ವಿಟ್ಲ ಅರಮನೆಯ ಪ್ರತಿನಿಧಿ ಶ್ರೀ ಕೃಷ್ಣವರ್ಮ ಪಾಂಡಾಜೆ, ರಾಮಕೃಷ್ಣ ಕಾಟುಕುಕ್ಕೆ, ಶ್ರೀ ವಿಷ್ಣುಮಂಗಲ ಸೇವಾ ಸಮಿತಿ ಸದಸ್ಯರು, ದಿವ್ಯ ಜ್ಯೋತಿ ಮಿತ್ರ ವೃಂದದ ಸದಸ್ಯರು, ಸುಜ್ಞಾನ ಮಹಿಳಾ ಮಂಡಳಿ ಸದಸ್ಯರು, ಊರ ಪರವೂರ ಸಮಸ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

