ವಿಟ್ಲ: ಜೀಪಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಒಬ್ಬ ಆರೋಪಿ, ದನ, ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಇಡ್ಕಿದು ಗ್ರಾಮದಲ್ಲಿ ನಡೆದಿದೆ.
ಇಡ್ಕಿದು ಗ್ರಾಮದ ಮಿತ್ತೂರು ಬರ್ಕೊಡಿ ಏಮಾಜೆ ನಿವಾಸಿ ಪದ್ಮನಾಭ ಗೌಡ (42) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಮಿತ್ತೂರು ನಿವಾಸಿ ಹಂಝ ಎಂಬಾತ ಪರಾರಿಯಾಗಿದ್ದಾರೆ.
ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿ ಜೀಪಿನಲ್ಲಿ ಜಾನುವಾರನ್ನು ಸಾಗಾಟ ಮಾಡುತ್ತಾರೆಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಎಸೈ ಮತ್ತು ಸಿಬ್ಬಂದಿಗಳು ತೆರಳಿದ್ದು, ಮಿತ್ತೂರು ಕಡೆಯಿಂದ ಸೂರ್ಯ ಕಡೆಗೆ ಜೀಪಿನಲ್ಲಿ ಒಂದು ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ವಾಹನ ನಿಲ್ಲಿಸಲು ತಿಳಿಸಿದಾಗ ಜೀಪು ಚಾಲಕ ಸಿಬ್ಬಂದಿಯವರನ್ನು ಕಂಡು ಒಮ್ಮೆಲೇ ಜೀಪನ್ನು ಚಲಾಯಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಬಳಿಕ ಪೊಲೀಸರ ತಂಡ ವಾಹನ ತಡೆದ ಸಮಯ ಜೀಪಿನ ಎಡ ಬದಿಯಲ್ಲಿ ಕುಳಿತ್ತಿದ್ದ ಮತ್ತೊಬ್ಬ ಆರೋಪಿ ಜೀಪಿನಿಂದ ಇಳಿದು ಗುಡ್ಡದ ಮಾರ್ಗವಾಗಿ ಓಡಿ ತಪ್ಪಿಸಿಕೊಂಡಿದ್ದಾನೆ. ಬಳಿಕ ಜೀಪಿನ ಚಾಲಕನನ್ನು ಹಿಡಿದು ವಿಚಾರಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ವಿಟ್ಲ ಪೊಲೀಸರು ಒಬ್ಬ ಆರೋಪಿ, ಒಂದು ದನ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.