Friday, March 29, 2024
spot_imgspot_img
spot_imgspot_img

ವಿಟ್ಲ ಅರಮನೆ ಮತ್ತು ಎರುಂಬು ವಿಷ್ಣುಮಂಗಲ ದೇವಸ್ಥಾನ

- Advertisement -G L Acharya panikkar
- Advertisement -

✍️ರಾಧಾಕೃಷ್ಣ ‘ರಾಮದೇವ್ ‘ವಿಟ್ಲ

“ನಂಬಿಕೆಯೊಂದು ಕೈ ಹಿಡಿದು ನಡೆಸಿತ್ತು ನಂಬಿದವರು ಕೈ ಬಿಟ್ಟಾಗ”ಎಂಬುದು ಸುಭಾಷಿತ. “ಕಲಿಯುಗ ಕೆಟ್ಟದ್ದು ಕಲಿಯುಗದಲ್ಲಿ ಧಾರ್ಮಿಕ ಆಚರಣೆಗಳು ನಶಿಸಿಹೋಗುತ್ತವೆ” ಎನ್ನೋದು ಮಾತಿಗಷ್ಟೇ ಸೀಮಿತ. ಅದು ವಾಸ್ತವಕ್ಕಲ್ಲ. ದೇವತಾ ಕಾರ್ಯಗಳ ಮೇಲೆ ನಂಬಿಕೆ ಅದಮ್ಯವಾಗಿ ವ್ಯಾಪಿಸುತ್ತಾ ಪುರಾತನ ಕ್ಷೇತ್ರಗಳಲ್ಲಿ ಮತ್ತೆ ಚೇತನವನ್ನು ಪಡೆಯುತ್ತಿದೆ ಎಂಬುದು ನಮ್ಮ ಕಣ್ಮುಂದೆ ನಡೆಯುತ್ತಿರುವ ಸತ್ಯಾಂಶಗಳು. ಪೌರಾಣಿಕ ಹಿನ್ನೆಲೆ ಇರುವ ಏಕಚಕ್ರಪುರ ಅಥವಾ ಇಷ್ಟಿಕಾಪುರ, ಇಟ್ಟೆಲ್ ಅಂದೂ – ಇಂದು ವಿಟ್ಲ ಪಂಚಲಿಂಗೇಶ್ವರನ ಸಾನಿಧ್ಯ

ವಿಟ್ಲ ಅರಸುಮನೆತನ,ವಿಟ್ಲ ಸೀಮೆ ಹೀಗೆ ಐತಿಹ್ಯ ಹೊಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ. ಪ್ರಸ್ತುತ ವಿಟ್ಲ ಸೀಮೆಗೆ ಪುರಾತನದಲ್ಲಿ ಡೊಂಬ ಹೆಗಡೆ ಅರಸರ ಆಳ್ವಿಕೆ, ಕ್ರಮೇಣ ತಮ್ಮ ಪರಿವಾರದವರು ಟಿಪ್ಪುವಿನಿಂದ ಹಿಂಸಿಸಲ್ಪಟ್ಟು ಅರಮನೆಯ ಮೇಲೆ ಅವನ ದಾಳಿಯಾದಾಗ, ಅರಸರು ಸಮೇತ ಪರಿವಾರದವರು ಕೇರಳದ ತಲಚೇರಿಯಲ್ಲಿ ವಾಸ್ತವ್ಯವಿದ್ದರು ಮತ್ತು ಕ್ರಮೇಣ ಹೆಗಡೆ ಮನೆತನದವರು ಕೇರಳದಲ್ಲಿ ‘ವರ್ಮರು’ ಎಂದು ಕರೆಯಲ್ಪಟ್ಟು ಸುಮಾರು 1750-1800 ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಗೆ ಸೇರಿದ್ದ ಅಳಿಕೆ ಗ್ರಾಮದ ಎರುಂಬು ಪರಿಸರದಲ್ಲಿ ಮೊದಲೇ ಕಟ್ಟಿಸಲ್ಪಟ್ಟ ಅರಮನೆಯಲ್ಲಿ ವಾಸವಿದ್ದರು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಈ ಬಗ್ಗೆ ಕೆಲವೊಂದು ಪುರಾವೆಗಳು ಎರುಂಬು ಹಳೆಯರಮನೆ ಮತ್ತು ಸುತ್ತುಮುತ್ತಲು ಕಾಣಸಿಗುತ್ತದೆ.

ಹಿಂದೆ ಮಾಯಿಲ ಅರಸರು ಮತ್ತು ವಿಟ್ಲ ಅರಸು ಮನೆತನದ ನಡುವೆ ಸಂಬಂಧ ಕಲ್ಪಿಸುವ ವಿಷಯದಲ್ಲಿ ವ್ಯಾಜ್ಯ ನಡೆದು ಉಪಾಯದಿಂದ ಮಾಯಿಲ ಕುಟುಂಬವನ್ನು ಎರುಂಬು ನೆಲಿಮಾರು ಗದ್ದೆಯಲ್ಲಿ ಚಪ್ಪರ ಹಾಕಿ, ನೆಲಕ್ಕೆ ನೆಲ್ಲಿಕಾಯಿ ಹರಡಿ ಮೇಲೆ ಚಾಪೆ ಹಾಕಿ ಮಾಯಿಲರನ್ನು ಕಾರ್ಯಕ್ರಮದ ನಿಮಿತ್ತ ಆಹ್ವಾನಿಸಿ, ಬಂದಿದ್ದ ಮಾಯಿಲರನ್ನು ಓಡಿಹೋಗದಂತೆ ಮಾಡಿ ಒಬ್ಬೊಬ್ಬರನ್ನೇ ಕಡಿದು ನೀರ್ವಂಶ ಮಾಡಲಾಗಿದೆ ಎಂಬುದು ಹಿರಿಯರ ಕಥೆ.ಆ ಬಗ್ಗೆ ಮಾಯಿಲರ ಕೋಟೆ ಹಾಗೂ ಎರುಂಬು ನೆಲ್ಲಿಮಾರು ಗದ್ದೆಯಲ್ಲಿಯ ಕೆಲವು ಕುರುಹುಗಳಿವೆ. ಮಾಯಿಲ ಕುಟುಂಬದವರು ಸದ್ಯಕ್ಕೆ ಈ ಪರಿಸರದಲ್ಲಿ ಇಲ್ಲದಿದ್ದರೂ ಕೊಡಗಿನಲ್ಲಿ ಇದ್ದಾರೆ ಎನ್ನುವುದು ಕೇಳಿ ಬರುತ್ತಿದೆ.

ಎರುಂಬು ಪರಿಸರಕ್ಕೆ ಗ್ರಾಮ ದೇವರಾಗಿ ಶ್ರೀ ಶಂಕರನಾರಾಯಣ ದೇವರ ಸಾನಿಧ್ಯವಿದೆ. ಬಹಳ ಪುರಾತನ ದೇವಾಲಯ ವೆಂದೂ, ಡೊಂಬ ಅರಸರ ಕಾಲದಲ್ಲಿ ನಿರ್ಮಿತ ವೆಂದು ಹೇಳಬಹುದಾಗಿದೆ. ಎರುಂಬು ಹಳೆ ಅರಮನೆಯಲ್ಲಿ ವಿಟ್ಲ ಅರಸುಮನೆತನ ವಾಸವಿದ್ದ ಕಾಲಕ್ಕೆ ಸುಭದ್ರಮ್ಮ ರವರ ಆಳ್ವಿಕೆಯ ಕಾಲಘಟ್ಟದಲ್ಲಿ ಗ್ರಾಮ ದೇವಸ್ಥಾನ ಶಂಕರನಾರಾಯಣ ದೇವರ ಪ್ರಸಾದ ಸ್ವೀಕಾರವಾದ ಬಳಿಕ ಅರಮನೆಯಲ್ಲಿ ಮಧ್ಯಾಹ್ನದ ಉಪಚಾರ ನಡೆಯುತ್ತಿತ್ತು. ಕ್ರಮೇಣ ಮನೆದೇವರು ದೂರವಾಯಿತು ಮತ್ತು ದಿನದ ಪ್ರಸಾದ ಪಡೆಯುವಲ್ಲಿ ತಕರಾರು ಬಂದು ಶ್ರೀ ವಿಷ್ಣುಮಂಗಲ ದೇವಸ್ಥಾನದ ಸ್ಥಾಪನೆಯಾಯಿತು ಎಂಬುದು ಬಲ್ಲ ಹಿರಿಯರಿಂದ ತಿಳಿದ ವಿಚಾರ.

ಸ್ಥಾಪನೆಯ ಬಳಿಕ ರವಿವರ್ಮ ನರಸಿಂಹರಾಜರು ದೇವಳದ ಪರಿಚಾರಿಕೆಗಾಗಿ ಮತ್ತು ವೈದಿಕ ಕಾರ್ಯಗಳಿಗಾಗಿ ಗೇಣಿಯನ್ನು ದುಪ್ಪಟ್ಟು ಗೊಳಿಸಿ, ಸುಮಾರು ಎಕರೆ ಭೂಮಿಯನ್ನು ಉಂಬಳಿಯಾಗಿ ಕಾರಂತ ಕುಟುಂಬಕ್ಕೆ ನೀಡಲಾಯಿತು ಎಂದು ಊರ ಹಿರಿಯರ ಅಂಬೋಣ.ಆ ಬಳಿಕ 1945-48ರ ಅವಧಿಯಲ್ಲಿ ಶ್ರೀ ವಿಷ್ಣುಮಂಗಲ ದೇವಸ್ಥಾನಕ್ಕೆ ಸಿಡಿಲು ಬಡಿದು ಭ್ರಷ್ಟವಾದುದಕ್ಕೆ ಮತ್ತು ದೇವಳದ ಬಾವಿಯಲ್ಲಿ ಬ್ರಾಹ್ಮಣರೋರ್ವರ ಆಕಸ್ಮಿಕ ಮರಣದಿಂದ ಭ್ರಷ್ಟತೆ ಕಂಡು ದೇವಳವನ್ನು ಮುಂಭಾಗದಲ್ಲಿ ರಚಿಸಿ ಬಾವಿಯನ್ನು ಮುಚ್ಚಿ ರವಿವರ್ಮ ಕೃಷ್ಣರಾಜರ ಆಳ್ವಿಕೆಯ ಸಮಯದಲ್ಲಿ ಜೀರ್ಣೋದ್ದಾರ ಮಾಡಲಾಯಿತು ಎನ್ನುವುದನ್ನು ತಿಳಿದವರು ಇದ್ದಾರೆ.ಹಾಗೆ ಅಂದಿನಿಂದ ಶ್ರೀ ವಿಷ್ಣುಮಂಗಲ ದೇವರಿಗೆ ಒಂದು ಹೊತ್ತಿನ ಪೂಜೆ, ವರ್ಷಕ್ಕೆ ಒಂದು ತುಳಸಿಪೂಜೆ, ಆದಳ ಒಕ್ಕಲು ಮನೆತನದಿಂದ ವಸಂತಪೂಜೆ ಹೀಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು.

ರವಿವರ್ಮ ಕೃಷ್ಣರಾಜರ ಶಿಕ್ಷಣ ಪ್ರೇಮದಿಂದ ಎರುಂಬು ಪರಿಸರದಲ್ಲಿ 1948ರ ಸುಮಾರಿಗೆ ಶಾಲೆ ಆರಂಭಿಸಿ ದೇವಸ್ಥಾನದ ಗೋಪುರ, ಕ್ರಮೇಣ ಶಾಲಾ ಕಟ್ಟಡ ಸ್ಥಾಪಿಸಿ ವಿಷ್ಣುಮಂಗಲ ದೇವರ ಹೆಸರಿನಲ್ಲೇ ಶಾಲೆ ನಡೆಯಿತು. ಶ್ರೀ ವಿಷ್ಣುಮಂಗಲ ಹಿರಿಯ ಪ್ರಾಥಮಿಕ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಇನ್ನೂ ಎಲ್ಲಾ ಕ್ಷೇತ್ರದಲ್ಲೂ ಮಿಂಚಿದ್ದರೂ, ಸುಮಾರು 15ವರ್ಷದಿಂದ ಮುಚ್ಚಿದ ಆ ಶಾಲೆಯನ್ನು ಉಳಿಸುವ ಪ್ರಯತ್ನ ಸಾಗದೆ ಪಳೆಯುಳಿಕೆ ಮಾತ್ರ ಕಾಣಲು ವರ್ಷ ಬೇಕಾಗಿಲ್ಲ. ಪ್ರಯತ್ನ ಪಟ್ಟರೆ ವಿದ್ಯಾದೇಗುಲ ಮತ್ತೆ ಬೆಳಕು ಕಾಣಲೂ ಬಹುದು.

ಪ್ರಸ್ತುತ ಶ್ರೀವಿಷ್ಣುಮಂಗಲನ ದೇವಾಲಯವು ಅರಮನೆ ಅನುವಂಶಿಕ ಮುಕ್ತೇಸರರ ಮಾರ್ಗದರ್ಶನದಲ್ಲಿ ಅರ್ಚಕ ಕಾರಂತ ಕುಟುಂಬದ ಶ್ರೀ ಬಾಲಕೃಷ್ಣ ಕಾರಂತರ ನಿರ್ದೇಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ಈ ದೇವಳದ ಸುವ್ಯವಸ್ಥೆಯ ಜವಾಬ್ದಾರಿಗೆ ಸೇವಕರಾಗಿ ದಿವ್ಯಜ್ಯೋತಿ ಮಿತ್ರವೃಂದದ ದುಡಿತ, ಹಿಂದಿನ ಅರ್ಚಕರಾದ ಶ್ರೀ ಶಿವರಾಮ ಕಾರಂತರ ಶ್ರದ್ದೆ, ಭಕ್ತಿಗಳಿಂದ 35 ವರ್ಷಗಳಿಂದ ಹಿಂದೆ ಇದ್ದ ಗುಡ್ಡದ ದೇವಸ್ಥಾನವು ಕ್ರಮೇಣ ನಾಟಕ, ಯಕ್ಷಗಾನ ತರಬೇತಿ, ಭಜನಾ ತರಬೇತಿಗಳ ಕೇಂದ್ರವಾಗಿ ಇದೀಗ ಸದಾ ಅನ್ನಸಂತರ್ಪಣೆ ಕಾರ್ಯಕ್ರಮ, ವೈದಿಕ,ಧಾರ್ಮಿಕ ಕಾರ್ಯಗಳ ನೆಲೆವೀಡಾಗಿ ಮಾಡಿದ ಕೀರ್ತಿ ಸಮಸ್ತರನ್ನು ಸೇರಿಸಿಕೊಂಡ ಹಾಗೂ ಅರ್ಚಕರಾದ ಶ್ರೀ ಬಾಲಕೃಷ್ಣ ಕಾರಂತರು, ದಿವ್ಯಜ್ಯೋತಿಯ ಅಗಲಿದ ಆತ್ಮಗಳಿಗೆ ಮತ್ತು ಶ್ರಮಿಸುತ್ತಿರುವ ಯುವ ಶಕ್ತಿಗಳಿಗೆ ಸಲ್ಲಲೇಬೇಕು. ಜೊತೆಗೆ ವಿಷ್ಣು ಮಂಗಲ ಸೇವಾ ಸಮಿತಿ, ಶ್ರೀ ಸುಜ್ಞಾನ ಮಹಿಳಾ ಮಂಡಳಿಗಳ ಸೇವೆಯನ್ನು ಉಲ್ಲೇಖಿಸಲೇಬೇಕು. ಹಾಗೆ ದೇವಾಲಯಕ್ಕೊಂದು ಹೊಸಬಾವಿ ನಿರ್ಮಾಣಕ್ಕೆ ದಾರಿ ತೋರಿದ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳು ಮತ್ತು ಧನಸಹಾಯ ಇತ್ತ ಶ್ರೀಕ್ಷೇತ್ರ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರು, ವಿದ್ಯುತ್ತೀಕರಣಗೊಳಿಸಲು ಸಹಕರಿಸಿದ ದಾನಿಗಳು,ಅರ್ಚಕ ಬಾಲಕೃಷ್ಣ ಕಾರಂತರು ಮತ್ತು ಸೇವಕರಿಂದ ಸುಮಾರು 500 ಜನರು ಕುಳಿತುಕೊಳ್ಳಬಹುದಾದ ಭವನದ ಮತ್ತು ಮೇಲ್ಚಾವಣಿಯ ವ್ಯವಸ್ಥೆ ಮಾಡಿದವರಿಗೂ ದೇವಾಲಯದ ಅಂಗಣಕ್ಕೆ ಕಲ್ಲು ಹಾಕಿಸಿ ಶ್ರೀ ನಾಗಸನ್ನಿಧಿ ನಿರ್ಮಾಣ, ಅಶ್ವತಕಟ್ಟೆ ನಿರ್ಮಾಣ ಊರವರ ಧಾರ್ಮಿಕ ಶ್ರದ್ಧೆಯನ್ನು ತೋರಿಸಿದೆ.
ಹಾಗೆ ಪ್ರತಿ ತಿಂಗಳ ಮೊದಲ ಆದಿತ್ಯವಾರ ಬೆಳಿಗ್ಗೆ ಭಜನಾ ಕಾರ್ಯಕ್ರಮ ಪವಮಾನ ಅಭಿಷೇಕ,ಕಾರ್ತಿಕ ಪೂಜಾ ಕಾರ್ಯಕ್ರಮ ನಿರಂತರ ನಡೆದು ನಿರಂತರ ರಂಗಪೂಜೆ,ತುಳಸಿ ಪೂಜೆ ಅಲ್ಲದೆ ವರ್ಷಕ್ಕೊಂದಾವರ್ತಿ ವಿಜೃಂಭಣೆಯ 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮಗಳು ಸುಮಾರು 25 ವರ್ಷಗಳಿಂದ ನಡೆಯುತ್ತಿದೆ. ಅಲ್ಲದೆ ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಭಜನೆ ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮ ಜರಗುತಿದೆ.

ಈ ವರ್ಷದ ಕಾರ್ಯಕ್ರಮ ಈ ಕೆಳಗಿನಂತಿದೆ

ತಾ 21/08/2021 ಶನಿವಾರ ಬೆಳಿಗ್ಗೆ ಗಣಪತಿ ಹವನ, ನವಕ ಅಭಿಷೇಕ, ನಾಗ ತಂಬಿಲ, ಭಜನೆ,ಬಲಿವಾಡು ಕೂಟ, ಮಹಾಪೂಜೆ, ಅನ್ನ ಸಂತರ್ಪಣೆ.

ತಾ 28/08/2021 ಸಾಯಂಕಾಲ ಭಜನೆ,7:00 ಗಂಟೆಗೆ ರಂಗಪೂಜೆ ಮಹಾಪೂಜೆ ಅನ್ನ ಸಂತರ್ಪಣೆ.

ತಾ 04/09/2021ಸಾಯಂಕಾಲ (ಕುಣಿತ ಭಜನೆ )7:00 ಗಂಟೆಗೆ ರಂಗಪೂಜೆ, ಅನ್ನ ಸಂತರ್ಪಣೆ.

ತಾ 11/09/2021/ಬೆಳಿಗ್ಗೆ ಸತ್ಯ ನಾರಾಯಣ ಪೂಜೆ, ಶನಿಶ್ವರ ಪೂಜೆ, ಭಜನೆ, ಮಹಾಪೂಜೆ, ಅನ್ನ ಸಂತರ್ಪಣೆ.

ಬಹಳ ಮುಖ್ಯವಾಗಿ ಪಾಕಶಾಲೆ ಹಾಗೂ ದೇವಳದ ದುರಸ್ತಿ ಕಾರ್ಯ ನಡಯಬೇಕಿದೆ. ತಾವೆಲ್ಲರೂ ಇಲ್ಲಿಯ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪಾಕಟಾಕ್ಷಕ್ಕೆ ಭಾಜನರಾಗಬೇಕಾಗಿ ವಿನಂತಿ.

driving
- Advertisement -

Related news

error: Content is protected !!