ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ಬಿಜೆಪಿ ಪಕ್ಷದ ಎಂಟು ಮಂದಿ ಪಟ್ಟಣ ಪಂಚಾಯಿತಿ ಸದಸ್ಯರು ಗೈರು ಹಾಜರಾಗಿದ್ದಾರೆ. ಇದರಿಂದ ಪಕ್ಷದಲ್ಲಿ ಬಂಡಾಯದ ಕಾವು ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ೧೨ ಹಾಗೂ ಕಾಂಗ್ರೆಸ್ ಬೆಂಬಲಿತ ೬ ಸೇರಿ ಒಟ್ಟು ೧೮ ಚುನಾಯಿತ ಪ್ರತಿನಿಧಿಗಳಿದ್ದಾರೆ. ೧೧ ಗಂಟೆಗೆ ಆರಂಭವಾಗಬೇಕಿದ್ದ ಸಭೆ ಸುಮಾರು ೧೫ ನಿಮಿಷಗಳ ಕಾಲ ತಡವಾಗಿ ಆರಂಭವಾಗಿದೆ. ಆದರೂ ಬಿಜೆಪಿ ಬೆಂಬಲಿತ ಉಪಾಧ್ಯಕ್ಷ ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷೆ ಸಹಿತ ೮ ಮಂದಿ ಸಭೆಗೆ ಗೈರಾಗಿದ್ದರು. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಸೇರಿ ೫ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಆಂತರಿಕ ಸಮಸ್ಯೆ ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಕಾರ್ಯವೈಖರಿಯ ಬಗ್ಗೆ ಅಸಮಾಧಾನದಿಂದ ಸಭೆಗೆ ಆಗಮಸಿಲ್ಲ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ನಡೆದ ವಿಶೇಷ ಸಾಮಾನ್ಯ ಸಭೆಗೂ ಈ ಎಂಟು ಮಂದಿ ಗೈರು ಹಾಜರಾಗಿದ್ದರು. ಬಿಜೆಪಿ ಪಕ್ಷದೊಳಗಿನ ಅಸಮಾಧಾನ ಗೈರು ಹಾಜರಾತಿಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ವಿಶೇಷ ಸಾಮಾನ್ಯ ಸಭೆ ಹಾಗೂ ಸಾಮಾನ್ಯ ಸಭೆ ಸೇರಿದಂತೆ ಎರಡು ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಹಾಜರಾದ ಸದಸ್ಯರಲ್ಲಿ ಕೇಳಿದಾಗ ಅವರು ವೈಯಕ್ತಿಕ ಕಾರಣದಿಂದ ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.


ಬಳಿಕ ಸಾಮಾನ್ಯ ಸಭೆ ಯಶಸ್ವಿಯಾಗಿ ನಡೆಯಿತು.
ನಿಕಟಪೂರ್ವ ಅಧ್ಯಕ್ಷ ಅರುಣ್ ವಿಟ್ಲ, ಸದಸ್ಯ ಅಬ್ದುಲ್ ರಹಿಮಾನ್ ಹಸೈನಾರ್, ಅಶೋಕ್ ಕುಮಾರ್ ಶೆಟ್ಟಿ ಮೊದಲಾದವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಲೋಕನಾಥ ಶೆಟ್ಟಿ, ಸುನೀತಾ ಕೋಟ್ಯಾನ್, ರಾಮದಾಸ ಶೆಣೈ, ಸಂದ್ಯಾಮೋಹನ್, ಲತಾವೇಣಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.
