ವಿಟ್ಲ ಪೇಟೆ ಉಳಿಸಿ-ಬೈಪಾಸ್ ರಸ್ತೆ ನಿರ್ಮಿಸಿ
ಸರ್ವ ಧರ್ಮದವರಿಂದ ಧಾರ್ಮಿಕ ಕ್ಷೇತ್ರ ದಲ್ಲಿ ವಿಶೇಷ ಪ್ರಾರ್ಥನೆಯ ಮೂಲಕ ಚಾಲನೆ
ವಿಟ್ಲ ಪೇಟೆಯಲ್ಲಿ ರಸ್ತೆ ಅಗಲೀಕರಣದ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, “ವಿಟ್ಲ ಪೇಟೆ ಉಳಿಸಿ – ಬೈಪಾಸ್ ರಸ್ತೆ ನಿರ್ಮಿಸಿ” ಎಂಬ ಆಗ್ರಹದೊಂದಿಗೆ ವಿಟ್ಲದ ವರ್ತಕರು, ಅಂಗಡಿ ಮಾಲಕರು ಹಾಗೂ ಸಮಾನ ಮನಸ್ಕರು ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದ್ದಾರೆ..
ಇಂದು ಬೆಳಿಗ್ಗೆ 10 ಗಂಟೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ವರ್ತಕರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ಸಂಜೆ 6.30 ಕ್ಕೆ ಕಡಂಬು ದೈವಸ್ಥಾನದ ಕೋಲದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಿದ್ದಾರೆ.

ವಿಟ್ಲದ ಮಸಲ್ಮಾನರು ಇಂದು ಶುಕ್ರವಾರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ್ದಾರೆ. ಕ್ರಿಶ್ಚಿಯನ್ ಸಮುದಾಯದವರು ಆದಿತ್ಯವಾರ ಚರ್ಚ್‌ನಲ್ಲಿ ಪ್ರಾರ್ಥನೆ ನಡೆಸಲಿದ್ದಾರೆ.
ರಸ್ತೆ ಅಗಲೀಕರಣದ ಹೆಸರಿನಲ್ಲಿ ಪೇಟೆಯ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು ಎಂದು ಸರ್ವಧರ್ಮದವರು ದೇವರಲ್ಲಿ ಪ್ರಾರ್ಥಿಸಿ ಮುಂದಿನ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.
ಇತ್ತೀಚೆಗೆ ಕಟ್ಟಡ ಮಾಲಕರ ಮತ್ತು ವರ್ತಕರ ದಿಡೀರ್ ಸಭೆ ಕರೆದು ಶಾಸಕ ಅಶೋಕ್ ಕುಮಾರ್ ರೈ ಅವರು ರಸ್ತೆ ಅಗಲೀಕರಣದ ಪರವಾಗಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸರ್ವೇ ನಡೆಸಿ ಸೂಕ್ತ ಪರಿಹಾರ ನೀಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅಲ್ಲದೆ, ಪ್ರಸ್ತುತ 22 ಮೀಟರ್ ಅಗಲೀಕರಣದ ಬದಲಿಗೆ ಪೇಟೆಯ ಪರಿಸ್ಥಿತಿಯನ್ನು ಗಮನಿಸಿ 15 ಮೀಟರ್‌ಗೆ ಇಳಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದರು.

ಆದರೆ, ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ರಸ್ತೆ ಅಗಲೀಕರಣದಿಂದ ಹಲವು ಕಟ್ಟಡಗಳು ತೆರವುಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ವಿಟ್ಲ ಪೇಟೆಯ ವ್ಯಾಪಾರ, ಜೀವನೋಪಾಯ ಹಾಗೂ ಐತಿಹಾಸಿಕ ಗುರುತಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣದ ಬದಲಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ, ವಿಟ್ಲ ಪೇಟೆಯನ್ನು ಉಳಿಸಬೇಕೆಂದು ಒತ್ತಾಯಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.








