Sunday, May 19, 2024
spot_imgspot_img
spot_imgspot_img

ಪುತ್ತೂರು: ಗೌರಿ ಕೊಲೆ ಪ್ರಕರಣ; ಇನ್ನೊಬ್ಬ ಯುವಕನ ಜತೆ ಸಲುಗೆ ಕೊಲೆಗೆ ಕಾರಣವಾಯಿತೇ..!?

- Advertisement -G L Acharya panikkar
- Advertisement -

ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಎದುರಿನಲ್ಲಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣದ ಬಂಧಿತ ಆರೋಪಿ ಪದ್ಮರಾಜ್ ನನ್ನು ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ,ಕೋರ್ಟು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಯುವತಿ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದು, ಪದ್ಮರಾಜ್‌ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಳು. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.

ವಿಟ್ಲ ಸಮೀಪದ ಅಳಿಕೆ ಗ್ರಾಮದ ಕುದ್ದುಪದವು ಆರಾಳ ನಿವಾಸಿ ಗೌರಿ (18) ಕೊಲೆಯಾದ ಯುವತಿ. ರವೀಂದ್ರ ಮಣಿಯಾಣಿ ಹಾಗೂ ಸೀತಾ ದಂಪತಿಗಳ ಪುತ್ರಿ ಇಬ್ಬರು ಹೆಣ್ಣು ಮಕ್ಕಳಲ್ಲಿ ಗೌರಿ ಹಿರಿಯವಳು. ಮನೆಯಲ್ಲಿ ಬಡತನದ ಕಾರಣ ಇತ್ತೀಚೆಗಷ್ಟೆ ಓದು ಮುಗಿಸಿದ ಪುತ್ತೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಅಂಗಡಿಯೊಂದರಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದಳು.

ಗೌರಿ 9ನೇ ತರಗತಿಯಲ್ಲಿರುವಾಗ ಶಾಲೆಗೆ ಕೆಲಸಕ್ಕೆಂದು ಬಂದ ಜೆಸಿಬಿ ಆಪರೇಟರ್‌ ಪದ್ಮರಾಜ್ ಪರಿಚಯ ಬೆಳೆದಿದೆ ಎನ್ನಲಾಗುತ್ತಿದೆ. ಬಳಿಕ ಇದು ಪ್ರೀತಿಗೆ ತಿರುಗಿದೆ. ಆರೋಪಿ ಪದ್ಮರಾಜ್‌ ಮೂಲತಃ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಳಿನವ. ಮೂರು ವರ್ಷಗಳ ಹಿಂದೆ ಆತನ ಕುಟುಂಬ ಈ ಜಾಗವನ್ನು ಮಾರಾಟ ಮಾಡಿ ವೇಣೂರಿನ ತಾಯಿಯ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರು.

ಇತ್ತೀಚೆಗೆ ಅವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಈ ವಿಚಾರ ವಿಟ್ಲ ಪೊಲೀಸ್‌ ಠಾಣೆ ಮೆಟ್ಟಿಲು ಕೂಡ ಏರಿತ್ತು. ಇನ್ನು ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಯಿಸಿ ಮುಂದಕ್ಕೆ ಪರಸ್ಪರ ಮಾತುಕತೆ ಇಲ್ಲ ಎಂಬುದಾಗಿ ಮುಚ್ಚಳಿಕೆ ಬರೆಯಿಸಿ ಕಳುಹಿಸಲಾಗಿತ್ತು. ಯುವತಿಯೇ ಕೇಸ್ ವಾಪಸ್ಸು ತೆಗೆದುಕೊಂಡಿದ್ದಳು ಎನ್ನುತ್ತಾರೆ ಪೊಲೀಸರು. ಈ ಘಟನೆಯ ನಂತರವೂ ಯುವತಿ ಹಾಗು ಪದ್ಮರಾಜ್ ಮಧ್ಯೆ ಸಂಪರ್ಕವಿತ್ತು, ಇಬ್ಬರು ಮೊಬೈಲ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದರು, ಜಗಳವಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಗೌರಿ ಬಗ್ಗೆ ಸಿಕ್ಕಾಪಟ್ಟೆ ಪೊಸೆಸಿವ್ ಆಗಿದ್ದ ಪದ್ಮರಾಜ್ ಗೆ ಆಕೆ ತನ್ನನ್ನೂ ಬೇಕಂತಲೇ ಅವಾಯ್ಡ್ ಮಾಡುತ್ತಿದ್ದಾಳೆ ಎಂದು ಅನಿಸಿದೆ.

ಹೀಗಾಗಿಯೇ ಆ 24 ರಂದು ಸರ್ವಿಸ್ ಮಾಡಿಸಲೆಂದು ಗೆಳೆಯ ಕೊಟ್ಟ ಬೈಕ್ ಹಿಡಿದು ಬಿಸಿರೋಡಿಗೆ ಬಂದಿದ್ದ ಪದ್ಮರಾಜ್ ಸೀದಾ ಪುತ್ತೂರಲ್ಲಿ ಗೌರಿ ಕೆಲಸ ಮಾಡುತ್ತಿರುವ ಅಂಗಡಿ ಬಳಿ ಬಂದಿದ್ದಾನೆ. ಮಧ್ಯಾಹ್ನ 1. 24 ರ ಸುಮಾರಿಗೆ ಗೌರಿಯವರು ಯಾರದೋ ಜತೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆ ಅಂಗಡಿಯೊಳಗೆ ಪ್ರವೇಶಿಸುವ ಪದ್ಮರಾಜ್ ಆಕೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿ ಕೈಯಿಂದ ಗೌರಿ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿಯುತ್ತಾನೆ. ಮೊಬೈಲ್ ಹಿಡಿದುಕೊಂಡು ಅಲ್ಲಿಂದ ತೆರಳಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮೊಬೈಲ್ ಕಸಿದುಕೊಂಡ ಆರೋಪಿ ತಾನು ಬಂದ ಬೈಕ್ ನಲ್ಲಿ ಬಸ್ಸು ನಿಲ್ದಾಣದ ಬಳಿಯಿಂದ ತೆರಳಿದ್ದಾನೆ.

ಅಂಗಡಿಯ ಒಳಗಡೆ ಬಂದು ಯುವಕ ಗೌರಿ ಮೇಲೆ ಹಲ್ಲೆ ಮಾಡಿರುವುದನ್ನು ಗಮನಿಸಿದ ಫ್ಯಾನ್ಸಿ ಅಂಗಡಿಯ ಮಾಲೀಕರು ಆಕೆಯ ಸಂಬಳ ನೀಡಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಯುವತಿ ಎರಡು ಮೊಬೈಲ್ ಹೊಂದಿದ್ದು, ಇನ್ನೊಂದು ಮೊಬೈಲ್‌ನಿಂದ ಪದ್ಮರಾಜ್ ಗೆ ಕರೆ ಮಾಡಿ ಮೊಬೈಲ್ ವಾಪಸ್ಸು ನೀಡುವಂತೆ ,ಇಲ್ಲದಿದ್ದಲ್ಲಿ ಠಾಣೆಗೆ ದೂರು ನೀಡುವುದಾಗಿ ದಮ್ಮಿ ಹಾಕಿದ್ದಾಳೆ ಎನ್ನಲಾಗಿದೆ.

ಈ ವೇಳೆ ಪುತ್ತೂರಿನಿಂದ ಬಿಸಿ ರೋಡ್ ನತ್ತ ತೆರಳುತ್ತಿದ್ದ ಆತ ಮತ್ತೆ ಪುತ್ತೂರಿನತ್ತ ವಾಪಸ್ಸಾಗಿದ್ದು ಅದೇ ಸಮಯದಲ್ಲಿ ಆತ ಚೂರಿ ಖರೀದಿಸಿರುವುದಾಗಿ ಪೊಲೀಸ್ ವಿಚಾರಣೆಯ ವೇಳೆ ಬಾಯ್ದಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಇತ್ತ ಯುವತಿ ಪೊಲೀಸ್ ಠಾಣೆಯ ಬಳಿ ಬಂದು ಯುವಕನಿಗಾಗಿ ಕಾಯುತ್ತಿದ್ದಳು. 1.55 ರ ಸುಮಾರಿಗೆ ಅಲ್ಲಿ ಬಂದ ಯುವಕ ಜಗಳವಾಡಿ ಚಾಕುವಿನಿಂದ ಯುವತಿ ಕುತ್ತಿಗೆಯನ್ನು ಸೀಳಿದ್ದಾನೆ. ಮೂರು ನಾಲ್ಕು ಬಾರಿ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲಿಂದ ಮತ್ತೆ ಬಿಸಿ ರೋಡ್ ನತ್ತ ಸಾಗುತ್ತಿದ್ದ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸುಮಾರು 2 ಲಕ್ಷ ರೂಪಾಯಿಯಷ್ಟು ಹಣವನ್ನು ಪದ್ಮರಾಜ್ ಯುವತಿ ಖಾತೆಗೆ ವರ್ಗಾವಣೆ ಮಾಡಿರುವುದು ಬ್ಯಾಂಕ್ ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ನಗದು, ಗಿಫ್ಟ್ ರೂಪದಲ್ಲೂ ಇನ್ನೊಂದಷ್ಟು ಖರ್ಚು ಮಾಡಿರಬಹುದೆಂದು ಆರೋಪಿಯ ಸ್ನೇಹಿತರು ತಿಳಿಸಿದ್ದಾರೆ.

ತಾಯಿ ನೀಡಿದ ದೂರಿನಲ್ಲೇನಿದೆ..?

ಅಳಿಕೆ ಗ್ರಾಮದ ನಿವಾಸಿಯಾದ ಗೌರಿ(18) ಎಂಬಾಕೆಯು ಪುತ್ತೂರಿನ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು ಈಕೆಯನ್ನು ಆರೋಪಿ ಬಂಟ್ವಾಳ ನಿವಾಸಿ ಪದ್ಮರಾಜ್ ಎಂಬಾತನು ಕಳೆದ 04 ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದು, ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆ. 24ರಂದು ಮಧ್ಯಾಹ್ನ ಗೌರಿಯನ್ನು ಆರೋಪಿ ಪದ್ಮರಾಜು ಪೀಡಿಸಿದ್ದು, ಈ ಬಗ್ಗೆ ಗೌರಿಯು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಸಮಯ ಆರೋಪಿಯು ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಚಾಕುವಿನಿಂದ ಕುತ್ತಿಗೆಯಿಂದ ಇರಿದು ಪರಾರಿಯಾಗಿರುತ್ತಾನೆ. ಗಂಭೀರವಾಗಿ ಗಾಯಗೊಂಡ ಗೌರಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿ ಆಕೆಯು ಸಾಯಂಕಾಲ ಮೃತಪಟ್ಟಿರುತ್ತಾಳೆ ಎಂಬುವುದಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೃತ ಗೌರಿಯ ತಾಯಿ ದೂರು ನೀಡಿದ್ದಾರೆ.

- Advertisement -

Related news

error: Content is protected !!