




ವಿಟ್ಲ: ಗ್ರಾಮೀಣ ಜನರ ಆರೋಗ್ಯ ಸೇವೆಗೆ ಸಮರ್ಪಿತವಾಗಿರುವ ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರ್ ತನ್ನ 25ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಡಾ. ಗೀತಪ್ರಕಾಶ್ ಮತ್ತು ಡಾ. ಗಾಯತ್ರಿ ಜಿ. ಪ್ರಕಾಶ್ ದಂಪತಿಗಳು 2000ರ ಡಿಸೆಂಬರ್ 28ರಂದು ವಿಟ್ಲದಲ್ಲಿ ಆರಂಭಿಸಿದ ಈ ಆರೋಗ್ಯ ಕೇಂದ್ರವು ಕುಟುಂಬ ವೈದ್ಯಪದ್ದತಿಯನ್ನು ಆಧಾರವಾಗಿಟ್ಟುಕೊಂಡು ಕಳೆದ 25 ವರ್ಷಗಳಿಂದ ನಿರಂತರ ಹಾಗೂ ನಿಷ್ಠಾವಂತ ಸೇವೆಯನ್ನು ನೀಡುತ್ತಾ ಬಂದಿದೆ.

ಹೆರಿಗೆ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಗೀತಪ್ರಕಾಶ್ ಅವರು ಸುಮಾರು 7,000ಕ್ಕೂ ಅಧಿಕ ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿ ಜನಾನುರಾಗಿಯಾದ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿ ಸಮಾಜಸೇವೆಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಡಾ. ಗಾಯತ್ರಿ ಜಿ. ಪ್ರಕಾಶ್ ಅವರೂ ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆದು ಕಳೆದ 25 ವರ್ಷಗಳಿಂದ ಸುರಕ್ಷಾ ಹೆಲ್ತ್ ಸೆಂಟರ್ ಮೂಲಕ ನಿರಂತರ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದಾರೆ. ಹುಟ್ಟೂರಿನಲ್ಲೇ ಆರೋಗ್ಯ ಸೇವೆಯನ್ನು ಆರಂಭಿಸಿ ತಾಯಿ–ಮಕ್ಕಳ ಆರೋಗ್ಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲು ಅವಕಾಶ ಕಲ್ಪಿಸಿದ ಸ್ಥಳೀಯ ಜನತೆಗೆ ವೈದ್ಯ ದಂಪತಿಗಳು ಈ ಸಂದರ್ಭದಲ್ಲಿ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಜನರ ಸಹಕಾರದೊಂದಿಗೆ ಉತ್ತಮ ಹಾಗೂ ವಿಸ್ತೃತ ಆರೋಗ್ಯ ಸೇವೆ ನೀಡುವ ಆಶಯವನ್ನು ವ್ಯಕ್ತಪಡಿಸಿರುವ ಅವರು, ವಿಟ್ಲ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನತೆಗೆ ಇನ್ನೂ ಹೆಚ್ಚು ಸೇವೆ ಸಲ್ಲಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ








