ಆಸ್ಟ್ರಿಯಾ(ನ.3): ಯೂರೋಪ್ನ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದಲ್ಲಿ ಭಯೋತ್ಪಾದಕ ದಾಳಿ ಆಗಿದೆ. ನಗರದ ಮಧ್ಯ ಭಾಗದ ಆರು ವಿವಿಧ ಸ್ಥಳಗಳಲ್ಲಿ ಉಗ್ರಗಾಮಿಗಳು ಶೂಟೌಟ್ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಹತ್ಯೆಯಾಗಿದ್ದಾರೆ. ಸಾವಿಗೀಡಾದವರಲ್ಲಿ ಒಬ್ಬ ಶಂಕಿತ ಉಗ್ರನೂ ಇರುವುದು ತಿಳಿದುಬಂದಿದೆ. ಸ್ಥಳೀಯ ಕಾಲಮಾನದಲ್ಲಿ ನಿನ್ನೆ ರಾತ್ರಿ 8 ಗಂಟೆಗೆ ಉಗ್ರರು ರೈಫಲ್ಗಳಿಂದ ಈ ದಾಳಿ ಮಾಡಿದ್ದಾರೆ. ಆದರೆ ಇವರು ಯಾವ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿಲ್ಲ.

ಆಸ್ಟ್ರಿಯಾದ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ಅವರು ಈ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಇದೊಂದು ಪೈಶಾಚಿಕ ಉಗ್ರ ದಾಳಿಯಾಗಿದೆ ಎಂದು ಬಣ್ಣಿಸಿದ ಅವರು “ನಮ್ಮ ದೇಶದಲ್ಲಿ ಈಗ ಕಠಿಣ ಕ್ಷಣಗಳನ್ನ ಎದುರಿಸುತ್ತಿದ್ದೇವೆ” ಎಂದು ವಿಷಾದಿಸಿದ್ದಾರೆ.

“ಈ ಉಗ್ರ ದಾಳಿ ನಡೆಸಿದವರ ವಿರುದ್ಧ ನಮ್ಮ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರೆ. ಭಯೋತ್ಪಾದನೆಗೆ ನಾವು ಯಾವತ್ತೂ ಹೆದರುವುದಿಲ್ಲ. ಎಲ್ಲಾ ರೀತಿಯಿಂದಲೂ ಇದನ್ನು ಎದುರಿಸುತ್ತೇವೆ” ಎಂದು ಚಾನ್ಸೆಲರ್ ಸ್ಪಷ್ಟಪಡಿಸಿದ್ದಾರೆ.










