




ಜಕಾರ್ತಾ: ಇಂಡೋನೇಷ್ಯಾದ ಅನಕ್ ಕ್ರಾಕಟೌ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು ದೇಶದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ 8 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಸುಮಾರು 1,70,000 ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಜಾವಾ ಮತ್ತು ಸುಮಾತ್ರಾ ದ್ವೀಪಗಳ ನಡುವೆ ಸುಂದಾ ಜಲಸಂಧಿಯಲ್ಲಿರುವ ಅನಕ್ ಕ್ರಾಕಟೌ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದ್ದು, ಇದರಿಂದ ದಟ್ಟ ಹೊಗೆ ಮತ್ತು ಬೂದಿ ಆ ಪ್ರದೇಶದಲ್ಲಿ ಆವರಿಸಿದೆ.
ಇದರಿಂದ ದೇಶದಲ್ಲಿ 1,500ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಜ್ವಾಲಾಮುಖಿ ಹೆಚ್ಚಾದ ಕಾರಣ ಜಕಾರ್ತಾ ಪ್ರದೇಶದ ಸುತ್ತಮುತ್ತಲಿನ ಶಾಲೆಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ತೆಗೆದುಕೊಳ್ಳಲಾಗುತ್ತಿದೆ.
ಎಂಟು ವಿಮಾನ ನಿಲ್ದಾಣಗಳ ಸ್ಥಗಿತದಿಂದ 1,558 ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ. ಇದು ಸುಮಾರು 170,000 ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ. ಇದರಲ್ಲಿ 900 ಕ್ಕೂ ಹೆಚ್ಚು ವಿಮಾನಗಳು ದೇಶದ ಪ್ರಮುಖ ಅಂತರರಾಷ್ಟ್ರೀಯ ವಿಮಾನಯಾನ ಕೇಂದ್ರವಾದ ಜಕಾರ್ತಾದ ಸೋಕರ್ನೊ-ಹಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿತ್ತು ಎಂದು ತಿಳಿದುಬಂದಿದೆ.
ಜ್ವಾಲಾಮುಖಿ ಕಣಗಳು ವಿಮಾನ ಎಂಜಿನ್ಗಳನ್ನು ಹಾನಿಗೊಳಿಸಬಹುದು. ಅಲ್ಲದೇ ಪೈಲಟ್ಗೆ ಗೋಚರತೆಯನ್ನು ಕಡಿಮೆ ಮಾಡಬಹುದು. ಜ್ವಾಲಾಮುಖಿಯಿಂದ ಉಂಟಾಗುವ ಹೊಗೆ – ಬೂದಿಯ ಮೋಡಗಳು ವಿಮಾನ ಮಾರ್ಗಗಳನ್ನು ಪ್ರವೇಶಿಸಿದರೆ ವಿಮಾನ ಹಾರಾಟಕ್ಕೆ ತೊಂದರೆ ಆಗಬಹುದು. ಇಲ್ಲವೇ ಬೇರೇ ಮಾರ್ಗಕ್ಕೆ ಬದಲಿಸುವ ಅಥವಾ ತುರ್ತು ಭೂಸ್ಪರ್ಶ ಮಾಡುವ ಅನಿವಾರ್ಯತೆ ಎದುರಾಗಬಹುದಾದ ಸಾಧ್ಯತೆಗಳಿವೆ. ಇದರಿಂದ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.








