Thursday, April 18, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ-ಅಕ್ರಮ ಗೂಡಾಂಗಡಿ ತೆರವಿಗೆ ಆಗ್ರಹಿಸಿದ ಸದಸ್ಯರು

- Advertisement -G L Acharya panikkar
- Advertisement -

ವಿಟ್ಲಅ.(28): ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾಲಾ ರಸ್ತೆಯಲ್ಲಿ ದಿನೇ ದಿನೇ ಅಕ್ರಮ ಗೂಡಾಂಗಡಿ ನಿರ್ಮಾಣಗೊಳ್ಳುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣವೇ ಅದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ಎಂ ವಿಟ್ಲ ಆಗ್ರಹಿಸಿದರು.


ಅವರು ಮಂಗಳವಾರ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.ಸದಸ್ಯ ರವಿಪ್ರಕಾಶ್ ಮಾತನಾಡಿ ಚರ್ಚ್ ರಸ್ತೆಯಲ್ಲಿ ಹೊಸ ಗೂಡಾಂಗಡಿಗಳು ತಲೆ ಎತ್ತುತ್ತಿದೆ. ಮುಂದಿನ ದಿನಗಳಲ್ಲಿ ವಿಟ್ಲ ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ ಸಂಭವಿಸಿದಾಗ ಚರ್ಚ್ ರಸ್ತೆಯಲ್ಲಿ ಪಾರ್ಕಿಂಗ್ ಗೆ ಸ್ಥಳ ನೀಡಬಹುದು. ಆದರೆ ಇದೀಗ ಗೂಡಾಂಗಡಿ ನಿರ್ಮಾಣವಾಗಿರುವುದರಿಂದ ಸಮಸ್ಯೆಯಾಗಲಿದೆ ಎಂದರು. ಈ ಸಂದರ್ಭ ಮಾತನಾಡಿದ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಅವರು ಅಕ್ರಮ ಗೂಡಾಂಗಡಿ ನಿರ್ಮಾಣ ಒಂದು ವರ್ಷದಲ್ಲಿ ನಡೆದದ್ದು ಅಲ್ಲ ಕಳೆದ ಬಾರಿಯ ಅಧ್ಯಕ್ಷರ ಅವಧಿಯಲ್ಲಿಯೂ ಇತ್ತು ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಸದಸ್ಯ ಶ್ರೀಕೃಷ್ಣ ಮಾತನಾಡಿ ಬೇರೆ ಬೇರೆ ವಾಹನಗಳಲ್ಲಿ ವಿಟ್ಲ ಪೇಟೆಗೆ ಬಂದು ಅಕ್ರಮವಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತೆರಿಗೆ ಪಾವತಿಸುವ ಅಂಗಡಿಯವರಿಗೆ ತೊಂದರೆಯಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಕೋಳಿ ಅಂಗಡಿಯವರು ಬಾಡಿಗೆ ಪಾವತಿಸದೇ ವ್ಯಾಪಾರ ಮಾಡುತ್ತಿದ್ದಾರೆ. ತಕ್ಷಣವೇ ಈ ಅಂಗಡಿಗೆ ಬೀಗ ಹಾಕಬೇಕು ಎಂದು ಆಗ್ರಹಿಸಿದರು.ಅರುಣ್ ಎಂ ವಿಟ್ಲ ಮಾತನಾಡಿ ವಿಟ್ಲದ ಮೇಗಿನಪೇಟೆ ಕಲ್ಲಕಟ್ಟದಲ್ಲಿರುವ ಮದರಸ ಸಮಿತಿಯವರು ರಕ್ತೇಶ್ವರೀ ದೈವಸ್ಥಾನಕ್ಕೆ ತೆರಳುವ ರಸ್ತೆಯನ್ನು ಅತಿಕ್ರಮಿಸಿ ಆವರಣಗೋಡೆ ನಿರ್ಮಿಸಿದ್ದು. ಇದರಿಂದ ದೈವಸ್ಥಾನಕ್ಕೆ ತೆರಳುವ ಭಕ್ತಾಧಿಗಳಿಗೆ ತೊಂದರೆಯಾಗಿದೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ದೇವಸ್ಥಾನ, ಮಸೀದಿ, ಚರ್ಚ್‌ಗಳ ಜಾಗದ ವಿವಾದ ಬಂದಾಗ ಮಾನವೀಯತೆಬೇಕು. ಯಾವುದೇ ಸಮಸ್ಯೆ ಬಂದಾಗ ಮಾತುಕತೆ ಮೂಲಕ ಪರಿಹರಿಸಿಕೊಂಡು ಸೌಹಾರ್ದತೆಯಿಂದ ಹೋಗಬೇಕು ಎಂದರು. ಅರುಣ್ ಮಾತನಾಡಿ ವಿಟ್ಲದಲ್ಲಿ ಎಲ್ಲರೂ ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ. ಜಾಗದ ವಿಚಾರದಲ್ಲಿ ಮುಂದೆ ಯಾವುದೇ ತೊಂದರೆ ಆಗಬಾರದು ಈ ದೆಸೆಯಿಂದ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಸದಸ್ಯರಾದ ರಾಮ್‌ದಾಸ್ ಶೆಣೈ, ಚಂದ್ರಕಾಂತಿ ಶೆಟ್ಟಿ, ಇಂದಿರಾ ಅಡ್ಯಾಳಿ, ಗೀತಾಪುರಂದರ, ಸುನೀತಾ ಕೋಟ್ಯಾನ್, ಅಬೂಬಕ್ಕರ್, ಲತಾ ಅಶೋಕ, ಲೋಕನಾಥ ಶೆಟ್ಟಿ ಕೊಲ್ಯ, ಉಷಾ ಕೃಷ್ಣಪ್ಪ, ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಎಂಜಿನಿಯರ್ ಶ್ರೀಧರ್, ಸಿಬ್ಬಂದಿ ರತ್ನ ಮೊದಲಾದವರು ಭಾಗವಹಿಸಿದ್ದರು.

- Advertisement -

Related news

error: Content is protected !!