



ಕಡಬ: ಮಹಿಳೆ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಹಾಗೂ ಮಹಿಳೆಯ ಪತಿ ಆತ್ಮಹತ್ಯೆಗೆ ಯತ್ನಿಸಿರುವ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಕೊಯ್ಲ ಗ್ರಾಮ ಜನತಾ ಕಾಲೋನಿ ನಿವಾಸಿ ಮುನೀರ್ ಅವರ ಪತ್ನಿ ನೇಹಾ (26) ಹಾಗೂ ಪುತ್ರ ಮಹಮ್ಮದ್ ನಿಯಾಲ್ (ಸುಮಾರು 3.5 ವರ್ಷ) ನಾಪತ್ತೆಯಾಗಿದ್ದಾರೆ. ಈ ಸಂಬಂಧ ಮುನೀರ್ ಅವರ ಅಕ್ಕ, ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಹಾಜಿರಾಬಿ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 04/2026, ಕಲಂ: 00 MP (ಹೆಂಗಸು ಮತ್ತು ಮಗು ಕಾಣೆ) BNS–2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ:
ದೂರಿನ ಪ್ರಕಾರ, ತಮ್ಮ ಎರಡನೇ ತಮ್ಮನಾದ ಮುನೀರ್ ಅವರು ಸುಮಾರು 8 ವರ್ಷಗಳ ಹಿಂದೆ ನೇಹಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಒಬ್ಬ ಹೆಣ್ಣು ಹಾಗೂ ಒಬ್ಬ ಗಂಡು ಮಗು ಇದ್ದಾರೆ. ಮುನೀರ್ ಹಾಗೂ ಅವರ ಪತ್ನಿ ಆರಂಭದಲ್ಲಿ ಕೊಯ್ಲದಲ್ಲಿರುವ ತಂದೆಯ ಮನೆಯಲ್ಲಿ ಸುಮಾರು ಎರಡು ವರ್ಷ ವಾಸವಿದ್ದು, ನಂತರ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಇತ್ತೀಚೆಗೆ ಮೂರು ತಿಂಗಳ ಹಿಂದೆ ಕೆಲಸದ ನಿಮಿತ್ತ ಮುನೀರ್ ಅವರು ಪತ್ನಿ ಹಾಗೂ ಸಣ್ಣ ಮಗನೊಂದಿಗೆ ಬೆಂಗಳೂರಿಗೆ ತೆರಳಿದ್ದು, ದೊಡ್ಡ ಮಗಳನ್ನು ತಂದೆಯ ಮನೆಯಲ್ಲಿ ಬಿಟ್ಟು ಹೋಗಿದ್ದರು. 07-11-2025ರಂದು ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮನೆಗೆ ಬಂದು ಅದೇ ದಿನ ವಾಪಸ್ ಹೋಗಿದ್ದರು.
25-12-2025ರಂದು ಮುನೀರ್ ಒಬ್ಬರೇ ಬೆಂಗಳೂರಿನಿಂದ ಬಂದು ತಂದೆಯ ಮನೆಯಲ್ಲಿ ಉಳಿದುಕೊಂಡಿದ್ದು, ರಾತ್ರಿ ಸಮಯದಲ್ಲಿ ದೂರುದಾರರ ಮನೆಯಲ್ಲಿ ಇದ್ದರು. ಈ ವೇಳೆ ಪತ್ನಿ ಹಾಗೂ ಮಗುವಿನ ಬಗ್ಗೆ ಪ್ರಶ್ನಿಸಿದಾಗ, “ಇನ್ನೆರಡು ದಿನಗಳಲ್ಲಿ ಬರುತ್ತಾರೆ” ಎಂದು ತಿಳಿಸಿದ್ದರು. ಅಲ್ಲದೆ ಪತ್ನಿ ಮತ್ತು ಮಗನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು.
30-12-2025ರಂದು ಮುನೀರ್ ಅವರು ಹಗ್ಗ ತೆಗೆದುಕೊಂಡು ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಮರದಿಂದ ಕೆಳಗಿಳಿಸಿದ್ದರು. ಬಳಿಕ 03-01-2026ರಂದು ರಾತ್ರಿ ರಾಮಕುಂಜ ಗ್ರಾಮದ ನೀರಾಜೆ ಶಾಲೆ ಸಮೀಪ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಹಗ್ಗದಿಂದ ಇಳಿಸಿ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿದುಬಂದಿದೆ.
ಈ ವಿಷಯವನ್ನು ಮುನೀರ್ ಅವರ ಪತ್ನಿ ನೇಹಾಗೆ ತಿಳಿಸಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಕೊನೆಯದಾಗಿ 28-12-2025ರಂದು ಮುನೀರ್ ಅವರು ತಮ್ಮ ತಂದೆಯ ಮೊಬೈಲ್‌ನಿಂದ ಪತ್ನಿಯ ಮೊಬೈಲ್‌ಗೆ ಕರೆ ಮಾಡಿದ್ದರು. ಅದಾದ ಬಳಿಕ ನೇಹಾ ಅವರು ತಮ್ಮ ಮಗ ಮಹಮ್ಮದ್ ನಿಯಾಲ್ ಜೊತೆಗೆ ಯಾವುದೇ ಕರೆ ಸ್ವೀಕರಿಸದೇ ನಾಪತ್ತೆಯಾಗಿದ್ದಾರೆ ಎಂದು ಹಾಜಿರಾಬಿ ಅವರು ದೂರಿನಲ್ಲಿ ತಿಳಿಸಿದ್ದಾರೆ.










