ನವದೆಹಲಿ: ಏರ್ ಇಂಡಿಯಾ ಸಂಸ್ಥೆಯ ಮಹಿಳಾ ಪೈಲಟ್ಗಳ ತಂಡ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ವಿಶ್ವದ ಅತೀ ಉದ್ದವಾದ ವಾಯುಮಾರ್ಗದಲ್ಲಿ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಲು ಈ ಟೀಮ್ ಮುಂದಾಗಿದೆ.

ಸ್ಯಾನ್ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಆಗಸದಲ್ಲಿ ಸುಮಾರು 16,000 ಕಿಲೋ ಮೀಟರ್ ದೂರ ಹಾರಾಟ ನಡೆಸಲು ಮಹಿಳಾ ಕ್ಯಾಪ್ಟನ್ಗೆ ಜವಾಬ್ದಾರಿ ವಹಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೊದಿಂದ ಈ ಪ್ರಯಾಣ ಆರಂಭವಾಗಿದ್ದು, ನಾಳೆ ಈ ತಂಡ ಬೆಂಗಳೂರಿಗೆ ಆಗಮಿಸಲಿದೆ.

ತಜ್ಞರ ಪ್ರಕಾರ, ಉತ್ತರ ಧ್ರುವದ ಮೇಲೆ ಹಾರಾಟ ನಡೆಸಲು ತಾಂತ್ರಿಕವಾಗಿ ಬಹಳ ಅನುಭವ ಹೊಂದಿರಬೇಕು. ಹೀಗಾಗಿ ಏರ್ಲೈನ್ ಕಂಪನಿಗಳು ತಮ್ಮ ಅತ್ಯಂತ ಅನುಭವಿ ಪೈಲಟ್ಗಳನ್ನ ಈ ಮಾರ್ಗದಲ್ಲಿ ಹಾರಾಟ ಮಾಡಲು ಕಳುಹಿಸುತ್ತಾರೆ, ಆದರೆ ಈಗ ಏರ್ ಇಂಡಿಯಾ ಮಹಿಳಾ ಪೈಲಟ್ಗಳಿಗೆ ಜವಾಬ್ದಾರಿ ವಹಿಸಿರುವುದು ವಿಶೇಷವಾಗಿದೆ.

2013ರಲ್ಲಿ ಬೋಯಿಂಗ್ 777 ವಿಮಾನವನ್ನು ಹಾರಾಟ ನಡೆಸಿದ ವಿಶ್ವದ ಅತ್ಯಂತ ಕಿರಿಯ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜೋಯಾ ಅಗರವಾಲ್ ಈ ತಂಡವನ್ನ ಮುನ್ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಜೋಯಾ ಅಗರವಾಲ್, ಬಹಳಷ್ಟು ಜನ ಉತ್ತರ ಧ್ರುವವನ್ನು ನೋಡಿಯೇ ಇರುವುದಿಲ್ಲ, ಆದರೆ ಏರ್ ಇಂಡಿಯಾದ ಬೋಯಿಂಗ್ 777 ವಿಮಾನವನ್ನು ಮುನ್ನಡೆಸಲಿರುವುದು ಹೆಮ್ಮೆಯ ಸಂಗತಿ, ಇದು ನನಗೆ ದೊರೆತಿರುವ ಸುವರ್ಣಾವಕಾಶ ಎಂದಿದ್ದಾರೆ.

