ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ನಡೆಯಿತು. 20 ವರ್ಷಗಳ ಬಳಿಕ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇದು ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಕ್ಷಣ.
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಬಾರಿಸಬಹುದು ಎಂಬ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದೆ. ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಔಟಾದ ಬಳಿಕ ಒಂದೊಂದು ರನ್ ಮಾಡಲು ಟೀಂ ಇಂಡಿಯಾ ಹೆಣಗಾಡಿತ್ತು. ಕೊನೆಯ 10 ಓರ್‌ಗಳಲ್ಲಿ ಕೇವಲ 2 ಬೌಂಡರಿಯನ್ನಷ್ಟೇ ಬಾರಿಸಿ, 43 ರನ್ ಕಲೆಹಾಕಿತು. ಹಾಗಾಗಿ 240 ರನ್‌ಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೊನೆಯದಾಗಿ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಯಿತು. ಕೋಟ್ಯಾಂತರ ಭಾರತೀಯರ ಟ್ರೋಫಿ ಕನಸು ನುಚ್ಚು ನೂರಾಯಿತು. 2003ರಂತೆ ಭಾರತಕ್ಕೆ ಮತ್ತೆ ಸೋಲಿನ ಆಘಾತ ಎದುರಾಯಿತು. ಲೀಗ್ ಹಂತದಲ್ಲಿ ಹರಸಾಹಸದ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶಿಸಿ, ಸೌತ್ ಆಫ್ರಿಕಾ ವಿರುದ್ಧ ಪ್ರಯಾಸದ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಆಸೀಸ್ ದಾಖಲೆ ಬರೆದಿದೆ. ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆಟ ಪ್ರದರ್ಶಿಸಿ ಟ್ರೋಫಿ ಗೆದ್ದುಕೊಂಡಿದೆ. 6ನೇ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ಇತಿಹಾಸ ರಚಿಸಿದೆ. ಇತ್ತ ಭಾರತ ಕೊನೆಯ ಒಂದೇ ಒಂದು ತಪ್ಪಿನಿಂದ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಸ್ಲೋ ಪಿಚ್ ಕಂಡೀಷನ್ ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಭಾರತ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹೋರಾಟದ ಮೂಲಕ ಭಾರತ 240 ರನ್ ಸಿಡಿಸಿದರೂ ಆತಂಕ ಕಡಿಮೆಯಾಗಲಿಲ್ಲ. ಸುಲಭ ಟಾರ್ಗೆಟ್ ಕಾರಣ ಆಸ್ಟ್ರೇಲಿಯಾ ಮೊದಲ ಎಸೆತದಿಂದಲೇ ಅಗ್ರೆಸ್ಸೀವ್ ಬ್ಯಾಟಿಂಗ್ ಮೂಲಕ ರನ್ ಗಳಿಸಲು ಮುಂದಾಯಿತು, 42 ಎಸೆತ ಬಾಕಿ ಇರುವಂತೆಯೇ 241 ರನ್ ಹೊಡೆಯುವ ಮೂಲಕ ವಿಶ್ವಕಪ್‌ಗೆ ಮುತ್ತಿಕ್ಕಿತು. 2013ರಿಂದ ಭಾರತ ಎದುರಿಸುತ್ತಿರುವ ಐಸಿಸಿ ಟ್ರೋಫಿ ಬರ ಮತ್ತೆ ಮುಂದುವರಿಯಿತು.