

ಮುಂಬೈ,: ಆಧಾರ್ ದಾಖಲೆಗಳಲ್ಲಿ ತಾಂತ್ರಿಕ ದೋಷಗಳಿಂದಾಗಿ ನಾಗರಿಕರಿಗೆ ಅನಗತ್ಯ ತೊಂದರೆಗಳು, ಸೇವೆಗಳಿಗೆ ಪ್ರವೇಶ ನಿರಾಕರಣೆ ಮತ್ತು ತಪ್ಪಿಸಬಹುದಾದ ಮೊಕದ್ದಮೆಗಳ ಕುರಿತು ಬಾಂಬೆ ಉಚ್ಚ ನ್ಯಾಯಾಲಯವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವನ್ನು (ಯುಐಡಿಎಐ) ತರಾಟೆಗೆತ್ತಿಕೊಂಡಿದೆ.




ತಮ್ಮ ಆಧಾರ್ ದಾಖಲೆಗಳಲ್ಲಿನ ಬಯೊಮೆಟ್ರಿಕ್ ದೋಷಗಳು ಮತ್ತು ಇತರ ತಾಂತ್ರಿಕ ಅಡಚಣೆಗಳಿಂದ ನಾಗರಿಕರು ಅನಗತ್ಯ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಲು ನ್ಯಾಯಮೂರ್ತಿಗಳಾದ ಆರ್.ವಿ. ಘುಗೆ ಮತ್ತು ಎಚ್.ಎಸ್. ವೆನೆಗಾಲ್ಕರ್ ಅವರ ಪೀಠವು ಮೇ 6ರಂದು ಹೊರಡಿಸಿರುವ ತೀರ್ಪಿನಲ್ಲಿ ಯುಐಡಿಎಐಗೆ ಆದೇಶಿಸಿದೆ.ದತ್ತಾಂಶಗಳ ಸಮಗ್ರತೆಯನ್ನು ಕಾಪಾಡುವುದು ರಾಷ್ಟ್ರೀಯ ಪ್ರಾಮುಖ್ಯದ ವಿಷಯವಾಗಿದ್ದರೂ, ಅದರ ಅನುಷ್ಠಾನವು ನಾಗರಿಕ-ಕೇಂದ್ರಿತ, ಸುಲಭ ಮತ್ತು ಸಾಂವಿಧಾನಿಕವಾಗಿ ಹೊಂದಿಕೆಯಾಗುವಂತೆ ಇರಬೇಕು ಎಂದು ಪೀಠವು ಹೇಳಿದೆ.ಕೇವಲ ಬಯೊಮೆಟ್ರಿಕ್ ದಾಖಲೆಯಲ್ಲಿನ ಹಿಂದಿನ ದೋಷಕ್ಕಾಗಿ, ವಿಶೇಷವಾಗಿ ಅರ್ಜಿದಾರರು ಯಾವುದೇ ವಂಚನೆ ಅಥವಾ ಮೋಸ ಮಾಡಿರದಿದ್ದಾಗ ಅರ್ಹ ನಾಗರಿಕರಿಗೆ ಪರಿಹಾರ ಒದಗಿಸದಿರಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.19 ವರ್ಷ ಪ್ರಾಯದ ಅವಳಿ ಸೋದರರಾದ ರೋಹಿತ್ ನಿಖಾಲ್ಟಿ ಮತ್ತು ರಾಹುಲ್ ನಿಖಾಲ್ವೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಹೊರಬಿದ್ದಿದೆ.
2012ರಲ್ಲಿ ತಾವು ಅಪ್ರಾಪ್ತ ವಯಸ್ಕರಾಗಿದ್ದಾಗ ತಮಗೆ ಆಧಾರ್ ಕಾರ್ಡ್ಗಳನ್ನು ನೀಡಲಾಗಿತ್ತು. ಆದರೆ, ತಮ್ಮ ಬಯೊಮೆಟ್ರಿಕ್ಗಳನ್ನು ಅಪ್ಡೇಟ್ ಮಾಡಲು ಯತ್ನಿಸಿದಾಗ ಅಸಮಂಜಸವಾದ ಆಡಳಿತಾತ್ಮಕ ಗೊಂದಲಗಳು ಎದುರಾಗಿದ್ದವು. ತಮ್ಮನ್ನು ನಿರಂತರವಾಗಿ ಅಲೆಸಲಾಗಿತ್ತು. ಮೊದಲು ಬಯೊಮೆಟ್ರಿಕ್ಗಳನ್ನು ಅಪ್ಡೇಟ್ ಮಾಡುವಂತೆ ಮತ್ತು ನಂತರ ರದ್ದತಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಬಳಿಕ ರದ್ದತಿ ಪ್ರಕ್ರಿಯೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು.
ಅಂತಿಮವಾಗಿ ತಮ್ಮ ಸಂಖ್ಯೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು ಎಂದು ನಿಖಾಲ್ವೆ ಸೋದರರು ಅರ್ಜಿಯಲ್ಲಿ ದೂರಿದ್ದರು.ಬಾಲ್ಯದಲ್ಲಿನ ಬಯೊಮೆಟ್ರಿಕ್ಗಳು ತಪ್ಪಾಗಿದ್ದರೆ ಅದರ ದೋಷವನ್ನು ಅವಳಿ ಸೋದರರ ಮೇಲೆ ಹೊರಿಸುವಂತಿಲ್ಲ ಎಂದು ಹೇಳಿದ ಪೀಠವು, 15 ದಿನಗಳಲ್ಲಿ ಹೊಸದಾಗಿ ನೋಂದಣಿ ಅರ್ಜಿಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿತು. ಕಾನೂನಿನ ಪ್ರಕಾರ ನಾಲ್ಕು ವಾರಗಳಲ್ಲಿ ಅವರ ಅರ್ಜಿಗಳನ್ನು ಇತ್ಯರ್ಥಗೊಳಿಸುವಂತೆ ಪೀಠವು ಯುಐಡಿಎಐಗೆ ಆದೇಶಿಸಿತು.








