ಕಲಾವಿದರು, ಯಕ್ಷಗಾನ ಅಭಿಮಾನಿಗಳಿಂದ ವಿರೋಧ





ಮಂಗಳೂರು: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು. ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೋಸೆಕ್ಸ್ ಬೆಳೆಯುತ್ತಿತ್ತು ಎಂಬುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ್ ಬಿಳಿಮಲೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಯಕ್ಷಗಾನದ ತವರು ನೆಲವಾದ ಕರಾವಳಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲಿರುವ ಯಕ್ಷಗಾನ ಗ್ರೂಪ್ಗಳಲ್ಲಿ ಬಿಳಿಮಲೆ ಹೇಳಿಕೆ ಭಾರಿ ಚರ್ಚೆಗೆ ಗುರಿಯಾಗಿದ್ದು, ಅನೇಕರು ಬಿಳಿಮಲೆ ವಿರುದ್ಧ ಪ್ರತಿಭಟನೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕನಾಗಿರುವ ವ್ಯಕ್ತಿಯೊಬ್ಬರು ಪವಿತ್ರ ಕಲೆಯ ಬಗ್ಗೆ ಹೀನಾಯವಾಗಿ ಮಾತನಾಡಿರುವುದಕ್ಕೆ ಕಲಾವಿದರಿಂದಲೂ, ಯಕ್ಷಗಾನ ಅಭಿಮಾನಿಗಳಿಂದಲೂ ಆಕ್ರೋಶ ವ್ಯಕ್ತವಾಗಿದೆ. ಯಕ್ಷಗಾನ ಅಕಾಡೆಮಿ ಇಂಥ ಅವಮಾನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ವತಹ ಯಕ್ಷಗಾನ ಕಲಾವಿದ ಎಂದು ಹೇಳಿಕೊಳ್ಳುತ್ತಿರುವ ಬಿಳಿಮಲೆಯವರೂ ಅವರು ಹೇಳಿದ ಅನುಭವಕ್ಕೆ ತುತ್ತಾಗಿದ್ದಾರೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಈ ನಡುವೆ ಬಿಳಿಮಲೆ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟು ವಿವಾದದಿಂದ ಪಾರಾಗಲು ಯತ್ನಿಸಿದ್ದರೂ ಅವರ ಹೇಳಿಕೆಯನ್ನು ಪ್ರಕಟಿಸಿರುವ ನಾಡಿನ ಪ್ರಮುಖ ಪತ್ರಿಕೆ ಇಂದು ಅವರ ಭಾಷಣದ ಪೂರ್ಣ ವಿಡಿಯೋವನ್ನು ಸೋಷಿಯಲ್ ಮೀಡಿಯಾಕ್ಕೆ ಹಾಕಿ ಸತ್ಯದರ್ಶನ ಮಾಡಿಸಿದೆ. ಇದರಲ್ಲಿ ಬಿಳಿಮಲೆಯವರು ಯಕ್ಷಗಾನ ಕಲಾವಿದರ ಕುರಿತು ಬಹಳ ಹಗುರವಾಗಿ ಮಾತನಾಡುತ್ತಿರುವುದು ಕೇಳಿಸುತ್ತಿದೆ.
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳನ್ನು ಬಿಡುಗಡೆ ಮಾಡಿದ ನಂತರ ಮಾಡಿದ ಭಾಷಣದಲ್ಲಿ ಪುರುಷೋತ್ತಮ ಬಿಳಿಮಲೆಯವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕ್ಷಣಾರ್ಧದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಯಕ್ಷಗಾನ ಕಲಾವದರು ಸಲಿಂಗಿ ಕಾಮಿಗಳಾಗಿರುತ್ತಿದ್ದರು. ಹೆಂಡತಿ ಇದ್ದರೂ ತಿರುಗಾಟದ ಸಂದರ್ಭದಲ್ಲಿ ಆರೆಂಟು ತಿಂಗಳು ಮನೆಯಿಂದ ದೂರ ಇರಬೇಕಾದ ಸಂದರ್ಭದಲ್ಲಿ ಇದು ಅವರಿಗೆ ಅನಿವಾರ್ಯವಾಗಿತ್ತು ಎಂಬ ದಾಟಿಯಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದ್ದಾರೆ.
ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಮುಂದಿನ ವರ್ಷ ತಿರುಗಾಟಕ್ಕೆ ಮೇಳವೇ ಕಲಾವಿದರಿಗೆ ಸಿಗುತ್ತಿರಲಿಲ್ಲ. ವೇದಿಕೆಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದಿದ್ದಾರೆ.
ಕಲೆ, ದೈಹಿಕ ಕಾಮನೆಗಳು, ಭಾವನೆಗಳು ಇವೆಲ್ಲ ರಂಗಭೂಮಿಯ ಎದುರು ಕಾಣುವ ಲೋಕಕ್ಕಿಂತ ಭಿನ್ನವಾಗಿ ಪ್ರಕಟಗೊಳ್ಳುವ ಬಗೆ ಇದೆಯಲ್ಲ ಇವೆಲ್ಲ ವಿದ್ವಾಂಸರು, ಜಾನಪದ ವಿದ್ವಾಂಸರು ತಿಳಿದುಕೊಂಡು, ಅರ್ಥಮಾಡಿಕೊಂಡು ಯಾರಿಗೂ ತೊಂದರೆ ಆಗದ ಹಾಗೆ ಯಾರ ಭಾವನೆಗೂ ನೋವಾಗದ ಹಾಗೆ ಅಕ್ಷರದಲ್ಲಿ ಸುಂದರವಾಗಿ ಬರೆಯುವ ಕಲೆಯನ್ನು ಕಲಿತುಕೊಂಡರೆ ಯಕ್ಷಗಾನ ಜಾನಪದಕ್ಕೆ ಇನ್ನೊಂದು ಹೊಸ ಆಯಾಮ ಬರುತ್ತದೆ ಎಂದಿದ್ದಾರೆ.








