




ಯೆಮೆನ್ ಪ್ರಜೆಯ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಅಲ್ಲಿನ ಸುಪ್ರೀಂಕೋರ್ಟ್‍ನಿಂದ ರಿಲೀಫ್ ಸಿಕ್ಕಿಲ್ಲ.
ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನವೆಂಬರ್ 14ರಂದು ಯೆಮೆನ್ ಸುಪ್ರೀಂಕೋರ್ಟ್ ವಜಾ ಮಾಡಿದೆ. ಹೀಗಾಗಿ ನಿಮಿಷಾ ಪ್ರಿಯಾಗೆ ಗಲ್ಲುಶಿಕ್ಷೆ ಆಗೋದು ಖಚಿತವಾಗಿದೆ.ಇತ್ತ ತಮ್ಮ ಮಗಳನ್ನು ರಕ್ಷಿಸಿಕೊಳ್ಳಲು ಯೆಮೆನ್‍ಗೆ ತೆರಳಲು ಅನುಮತಿಸುವಂತೆ ಪ್ರಿಯಾ ತಾಯಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಬಗ್ಗೆ ವಾರದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೊ ಮಹ್ದಿ ಎಂಬ ವ್ಯಕ್ತಿಯನ್ನು ಹತ್ಯೆಗೈದು, ಆತನ ದೇಹವನ್ನು ಛಿದ್ರಗೊಳಿಸಿ, ಮೃತ ದೇಹದ ಅವಶೇಷಗಳನ್ನು ತನ್ನ ಯೆಮನ್ ನಲ್ಲಿನ ನಿವಾಸದ ನೀರಿನ ಕೊಳದಲ್ಲಿ ವಿಸರ್ಜಿಸಿದ ಆರೋಪದಲ್ಲಿ ನಿಮಿಷಾ ಪ್ರಿಯಾಳನ್ನು ಅಪರಾಧಿ ಎಂದು ಘೋಷಿಸಲಾಗಿತ್ತು.
2015ರಿಂದ ತಲಾಲ್ ರೊಂದಿಗೆ ಯೆಮನ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಾನು, ಆತನಿಂದ ಎರಡು ವರ್ಷಗಳ ಕಾಲ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ನಿಮಿಷಾ ಪ್ರಿಯಾ ಪ್ರತಿಪಾದಿಸಿದ್ದರು. ಆತ ನನ್ನ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡು ನಾನು ಮನೆಗೆ ಮರಳಲು ಸಾಧ್ಯವಾಗದಂತೆ ಮಾಡಿದ್ದ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆಕೆ ವಾದಿಸಿದ್ದಳು. ಆತನಿಗೆ ಇಂಜೆಕ್ಷನ್ ನೀಡಿ, ಆತನನ್ನು ಪ್ರಜ್ಞಾಹೀನನ್ನಾಗಿಸಿದ ನಂತರ ಆತನಿಂದ ನನ್ನ ಪಾಸ್ ಪೋರ್ಟ್ ಅನ್ನು ವಶಪಡಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಆದರೆ ಆತ ಕುಸಿದು ಬಿದ್ದು ಮೃತಪಟ್ಟ ಎಂದೂ ಆಕೆ ವಾದಿಸಿದ್ದಳು.