
ಉಡುಪಿ: ಆಕೆಯದ್ದು ಹನ್ನೆರಡು ವರ್ಷಗಳ ಅಜ್ಞಾತವಾಸ. ಗಂಡನ ಸಾವಿನ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡ ಉತ್ತರ ಭಾರತದ ಮಹಿಳೆ ದಕ್ಷಿಣದ ಕರಾವಳಿಗೆ ಬಂದು ಸೇರಿದ್ದರು. ಕಾಲ ಕಳೆದು ಎಲ್ಲ ಸರಿಯಾದಾಗ ಆಕೆಗೆ ತೊಡಕಾಗಿದ್ದು ಭಾಷೆ. ಆಕೆಯ ಅಲ್ಪ ಸ್ವಲ್ಪ ನೆನಪು. ಆದರೂ ಒಳ್ಳೆ ಕಾಲ ಕೂಡಿ ಬಂದು ಹನ್ನೆರಡು ವರ್ಷಗಳ ನಂತರ ತಾಯಿ ಮಗ ಒಂದಾದದ್ದೇ ರೋಚಕ. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿ ಆಗಿದ್ದು ಉಡುಪಿ ಶಂಕರಪುರದ ವಿಶ್ವಾಸದ ಮನೆ.


ಉತ್ತರ ಭಾರತದ ಅಸ್ಸಾಂ ಮೂಲದ ಮಹಿಳೆ ಬೇಗಂ, 2007ರಲ್ಲಿ ಗಂಡನ ಸಾವಿನ ಬಳಿಕ, ಮಾನಸಿವಾಗಿ ಕುಗ್ಗಿ ಹೋಗಿದ್ರು. 2008ರಲ್ಲಿ ಮನೆಯಿಂದ ಹೊರ ಬಂದ ಆಕೆ ಊರೂರು ಅಲೆದು, 2009ರಲ್ಲಿ ಮಂಗಳೂರು ಸೇರಿದ್ರು. ಮಂಗಳೂರಿನ ಬೀದಿಯಲ್ಲಿ ಅಲೆದಾಡುತ್ತಿದ್ದ ಈಕೆಯನ್ನ ಗಮಸಿದವರೊಬ್ಬರು ಉಡುಪಿ ಶಂಕರಪುರದಲ್ಲಿ ಇರುವ ವಿಶ್ವಾಸದ ಮನೆಯ ಸಂಸ್ಥಾಪಕ ಸುನೀಲ್ ಜಾನ್, ಡಿಸೋಜಾ ಅವರಿಗೆ ತಿಳಿಸಿದ್ರು. ಬಳಿಕ ಸುನಿಲ್ ಅವರು ಬೇಗಂ ಅವರನ್ನು ತನ್ನ ವಿಶ್ವಾಸದ ಮನೆಗೆ ಕರೆತಂದು ಔಷಧೋಪಚಾರ ಮಾಡಿದ ಬಳಿಕ ಗುಣಮುಖರಾದ್ರು.


ಹೆಸ್ರು ಬೇಗಂ ಐವರು ಮಕ್ಕಳು ದುಬ್ರಿಗೆ ಹೋಗಬೇಕು ಅನ್ನೋದು ಬಿಟ್ರೆ ಹೆಚ್ಚು ಮಾತನಾಡುತ್ತಿರಲಿಲ್ಲ, ಬಂಗಾಳಿ ಭಾಷೆ ಬಿಟ್ರೆ ಹಿಂದಿ ಬರ್ತಾ ಇರ್ಲಿಲ್ಲ. ಎಲ್ಲಾ ವಿಧದಲ್ಲೂ ಮನೆಯವರ ಸಂಪರ್ಕಕ್ಕೆ ಪ್ರಯತ್ನ ಪಟ್ಟರೂ ಆಕೆಯ ಮನೆಯವರನ್ನು ಸಂಪರ್ಕ ಮಾಡೋದು ಮಾತ್ರ ಕಷ್ಟವಾಗಿತ್ತು. ಸಂವಹನಕ್ಕೆ ಭಾಷೆಯೂ ದೊಡ್ಡ ತೊಡಕಾಗಿತ್ತು. ಕೊನೆಗೂ ತಾಯಿ ಮಕ್ಕಳು ಒಂದಾಗೋದು ದೇವರಿಗೂ ಪ್ರಿಯವಾಗಿತ್ತೋ ಏನೋ, ಇತ್ತೀಚೆಗೆ ಮಣಿಪಾಲ್ KMC ವಿದ್ಯಾರ್ಥಿಗಳು, ಆಶ್ರಮಕ್ಕೆ ಭೇಟಿ ನೀಡಿದಾಗ ಆಕೆಯನ್ನ ಮಾತನಾಡಿಸಿ ಮಾಹಿತಿ ಸಂಗ್ರಹಿಸಿ, ವಿಳಾಸವನ್ನು ಪತ್ತೆ ಹಚ್ಚಿದರು. ಅಪೂರ್ವ ಕ್ಷಣಕ್ಕೆ ವಿದ್ಯಾರ್ಥಿಗಳು ಕೊಂಡಿ ಆದ್ರು.

ಬೇಗಂ ಅವರ ಐವರು ಮಕ್ಕಳಲ್ಲಿ ಎರಡನೇ ಮಗ ತಹಜ್ಜುದ್ದೀನ್ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಉಡುಪಿಗೆ ಬಂದಿದ್ದ. ತಾಯಿ ನಮ್ಮನ್ನು ಬಿಟ್ಟು ಹೋಗುವಾಗ ನನಗೆ 12 ವರ್ಷ ಆಗಿತ್ತು. ಅಂದಿನಿಂದ ತಾಯಿಯನ್ನು ಸಾಕಷ್ಟು ಹುಡುಕಾಟ ನಡೆಸಿದ್ದೆವು, ಆದ್ರೆ ಸಾಧ್ಯವಾಗಿಲ್ಲ ಕೊನೆಗೂ, ವಿಶ್ವಾಸದ ಮನೆಯಲ್ಲಿ ತಾಯಿಯನ್ನು ನೋಡಿದೆ ಅಂತ ಕಣ್ಣೀರು ಹಾಕಿದ.











