


ಬಂಟ್ವಾಳ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಅನ್ಯಾಯವಾಗಿ ಗೂಂಡಾ ಕಾಯ್ದೆ ಹೇರುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಇಂದು ಬಿ.ಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಕಾರ್ಯಕ್ರಮವು ಸಾಮೂಹಿಕ ಹನುಮಾನ್ ಚಾಲೀಸಾ ಪಠಣದೊಂದಿಗೆ ಅತ್ಯಂತ ಶಿಸ್ತುಬದ್ಧವಾಗಿ ಪ್ರಾರಂಭವಾಯಿತು.
ವೇದಿಕೆಯಲ್ಲಿ ಪರಮಪೂಜ್ಯ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಘಟಕದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ಗೋಪಾಲ್ ಕುತ್ತಾರ್ , ಬಜರಂಗದಳದ ದಕ್ಷಿಣ ಪ್ರಾಂತ್ಯದ ಸಂಯೋಜಕರಾಗಿರುವ ಪ್ರಬಂಜನ್ ಸೂರ್ಯ, ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಹಿರಿಯ ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಸೇರಿದಂತೆ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.


ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿಂದೂ ಕಾರ್ಯಕರ್ತರು ಜೈಲಿನಲ್ಲಿದ್ದು, ನ್ಯಾಯಾಲಯದಿಂದ ಜಾಮೀನು ಸಿಕ್ಕಿದರು, ರಾಜ್ಯ ಸರ್ಕಾರ ಹಠಮಾರಿ ಧೋರಣೆಯಿಂದ ಅವರ ಮೇಲೆ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿ ಬಿಡುಗಡೆಗೆ ತಡೆಯೊಡ್ಡುತ್ತಿದೆ ಎಂದು ಮುಖಂಡರು ಆರೋಪಿಸಿದರು. ಇದು ರಾಜಕೀಯ ಪ್ರೇರಿತ ದಮನಕಾರಿ ಕ್ರಮ ಎಂದು ಕಿಡಿಕಾರಿದರು.
ಅಧಿಕಾರಿಗಳು ದಾರಿ ತಪ್ಪಿಸುವ ಧೋರಣೆ ಅನುಸರಿಸುತ್ತಿದ್ದು, ಹಿಂದೂ ಸಮಾಜ ಈಗ ಜಾಗೃತವಾಗಿದೆ. ಇಂತಹ ದಮನಕಾರಿ ಕ್ರಮಗಳನ್ನು ಕೂಡಲೇ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ವೇದಿಕೆಯಿಂದ ಎಚ್ಚರಿಕೆ ನೀಡಲಾಯಿತು.
ಸಭೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು, ಮಾತೆಯರು ಭಾಗವಹಿಸಿದ್ದರು.








