ಬೆಂಗಳೂರು: ರಾಜ್ಯ ಸರ್ಕಾರ ಕರಾವಳಿ ಜನರಿಗೆ ಕಂಬಳದ ಸಮಯದಲ್ಲೇ, ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಕರಾವಳಿ ಜಾನಪದ ಕ್ರೀಡೆ ಕಂಬಳವನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ರೂ.1.00 ಕೋಟಿಗಳ ಸಹಾಯಧನ ಬಿಡುಗಡೆ ಮಾಡಿ ಉಡುಗೋರೆ ನೀಡಿದೆ.

ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನರ, ಕರಾವಳಿ ಭಾಗದ ಜನರಿಗೆ ಜನಪ್ರಿಯ ಜಾನಪದ ಕ್ರೀಡೆ ಉತ್ತೇಜಿಸಲು 1 ಕೋಟಿ ಸಹಾಯಧನ ಬಿಡುಗಡೆ ಮಾಡಿದೆ.

ಈ ಕುರಿತಂತೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ರಾಜಶೇಖರ್ ಆದೇಶ ಹೊರಡಿಸಿದ್ದು, ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ತೀರ್ಮಾನಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ ರವರು ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಕಂಬಳ ವೀಕ್ಷಿಸಿ ಸ್ಥಳದಲ್ಲಿಯೇ ಪ್ರತಿ ಕಂಬಳಕ್ಕೆ ರೂ.5.00ಲಕ್ಷಗಳ ಸಹಾಯಧನ ಘೋಷಣೆ ಮಾಡಿದ್ದರು. ಈ ಘೋಷಣೆಯ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಸಹಾಯಧನ ಬಿಡುಗಡೆ ಆದೇಶವನ್ನು ಹೊರಡಿಸಿದೆ.

