ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ 1999ರ ಯುದ್ಧದಲ್ಲಿ ಪಾಕಿಸ್ತಾನದೊಂದಿಗೆ ಹೋರಾಡಿದ ಸೈನಿಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ಸಲ್ಲಿಸಿದ್ದಾರೆ. ಈ ದಿನವನ್ನು ಸೇನಾ ಪಡೆಗಳ ಅಸಾಧಾರಣ ಶೌರ್ಯದ ಸಂಕೇತ ಎಂದು ಅವರು ಕರೆದಿದ್ದಾರೆ. ನಿನ್ನೆಯಷ್ಟೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ದ್ರೌಪದಿ ಮುರ್ಮು, “ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ” ಎಂದು ಹೇಳಿದ್ದಾರೆ.
ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಭಾರತದ ಎಲ್ಲಾ ದೇಶವಾಸಿಗಳು ಋಣಿಯಾಗಿರುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ, ಶಕ್ತಿ ಮತ್ತು ನಿರ್ಣಯದ ಸಂಕೇತವಾಗಿದೆ. ಭಾರತಮಾತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ದೇಶವಾಸಿಗಳೆಲ್ಲರೂ ಸದಾ ಋಣಿಗಳಾಗಿರುತ್ತಾರೆ. ಜೈ ಹಿಂದ್! ಎಂದು ದ್ರೌಪದಿ ಮುರ್ಮು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ‘ಹೆಮ್ಮೆ ಮತ್ತು ವೈಭವದ ಸಂಕೇತ’. ದೇಶದ ಎಲ್ಲ ವೀರ ಪುತ್ರರಿಗೆ ನಾನು ವಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ತಾಯಿ ಭಾರತಾಂಬೆಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್! ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.