

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ತನ್ನ ಮಡದಿ ಹಾಗೂ ಮುದ್ದಾದ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯ ಕೋಣನ ಕುಂಟೆಯಲ್ಲಿ ಭೀಕರ ಕೃತ್ಯ ನಡೆದಿದೆ. ನಾಗೇಂದ್ರ ಎಂಬಾತನೇ ಈ ರೀತಿಯಾಗಿ ಇಡೀ ಕುಟುಂಬವನ್ನು ನಾಶ ಮಾಡಲು ಹೊರಟವನು. ಅವನ ಈ ಕೃತ್ಯಕ್ಕೆ ಪತ್ನಿ ವಿಜಯ (28), ಪುಟ್ಟ ಮಕ್ಕಳಾದ ನಿಷಾ(7), ದೀಕ್ಷಾ (5) ಪ್ರಾಣ ಕಳೆದುಕೊಂಡಿದ್ದಾರೆ. ನಾಗೇಂದ್ರ ಊಟದಲ್ಲಿ ತಿಗಣೆ ಹಾಗೂ ಇಲಿ ಔಷಧ ಬೆರೆಸಿ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದಾನೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ಬೆಳಕಿಗೆ ಬಂದಿದೆ. ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಉಣಿಸಿರುವ ನಾಗೇಂದ್ರ ಬಳಿಕ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಾಗೇಂದ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಜಯ ಮತ್ತು ಮಕ್ಕಳ ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಗೇಂದ್ರ 2014 ರಲ್ಲಿ ವಿಜಯ ಎಂಬವರನ್ನು ವರಿಸಿದ್ದರು. ವಿಪರೀತ ಕುಡಿತದ ದಾಸನಾಗಿದ್ದ ನಾಗೇಂದ್ರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಮನೆಯ ಜವಾಬ್ದಾರಿಯನ್ನೆಲ್ಲ ಪತ್ನಿ ವಿಜಯ ನೋಡಿಕೊಳ್ಳುತ್ತಿದ್ದರು.
ಮೆಡಿಕಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯ ತನ್ನ ತಾಯಿ ಮನೆ ಸಮೀಪವೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಡ್ಡರಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಬ್ಬರು ಓದುತ್ತಿದ್ದರು. ಸದ್ಯ ನಾಗೇಂದ್ರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪ್ರಕರಣ ದಾಖಲಾಗಿದೆ