ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್ ಇಡೋದಾಗಿ ‘ಹುಚ್ಚ ಸ್ವಾಮಿ ವೆಂಕಟ್’ ಹೆಸರಿನಲ್ಲಿ ಬೆದರಿಕೆ ಮೇಲ್ ಕಳಿಸಿ ಸೋಮವಾರ ಇಡೀ ದಿನ ಆತಂಕ ಹುಟ್ಟಿಸಿದ್ದು ಯಾರೆಂದು ಬಯಲಾಗಿದೆ.
ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್ಗೆ ಬಾಂಬ್ ಇಡುವುದಾಗಿ ಬೆದರಿಕೆ ಮೇಲ್ ಕಳುಹಿಸಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಜು.21ರಂದು 10ನೇ ತರಗತಿಗೆ ಮೊದಲ ಸೆಮಿಸ್ಟರ್ ಪರೀಕ್ಷೆ ಇತ್ತು. ಪರೀಕ್ಷೆ ಮುಂದೂಡಿಸಲೆಂದು ಪ್ಲ್ಯಾನ್ ಮಾಡಿದ ವಿದ್ಯಾರ್ಥಿಯೊಬ್ಬ, [email protected] ಅನ್ನೋ ಮೇಲ್ ಐಡಿಯಿಂದ, ಭಾನುವಾರ ಸಂಜೆ 6.30ಕ್ಕೆ ಸ್ಕೂಲ್ನ 3ನೇ ಯೂನಿಟ್ಗೆ ಬೆದರಿಕೆ ಮೇಲ್ ಕಳುಹಿಸಿದ್ದ.
‘ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್, ಬಾಂಬ್ ಟೆರರಿಸ್ಟ್’ ಎಂದು ಮೇಲ್ ಕಳುಹಿಸಿದ್ದ.
ಸೋಮವಾರ ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್ ನೋಡಿ ಸಿಬ್ಬಂದಿ ಗಾಬರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಆರ್ಆರ್ ನಗರ ಠಾಣೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಆರ್ಆರ್ ನಗರ ಪೊಲೀಸರು, ವಿದ್ಯಾರ್ಥಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ವಿದ್ಯಾರ್ಥಿಯನ್ನ ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ.