




ಚುನಾವಣೆ ಹತ್ತಿರ ಬಂದಾಗ ರಾಜಕಾರಣಿಗಳು ಟೆಂಪಲ್ ರನ್ ಮಾಡೋದು ಸಾಮಾನ್ಯ. ಆದರೆ ಕರಾವಳಿಯಲ್ಲಿ ರಾಜಕೀಯ ನಾಯಕರು ದೈವಗಳ ಮೊರೆಹೋಗುವುದು ಕೂಡಾ ಸಹಜ. ಅದರಂತೆ ಶಾಸಕ ಹರೀಶ್ ಪೂಂಜಾ ನವ ಗುಳಿಗ ದೈವಗಳಿಗೆ ಕೋಲ ಸೇವೆಯನ್ನು ನೀಡಿದ್ದಾರೆ.
ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವಗುಳಿಗರಿಗೆ ಕೋಲ ನೀಡುವೆನೆಂದು ಶಾಸಕ ಹರೀಶ್ ಪೂಂಜಾ ಅವರು ಕಳೆದ ಚುನಾವಣಾ ಪೂರ್ವದಲ್ಲಿ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಹೀಗಾಗಿ ಮಾ. 13 ರಂದು ರಾತ್ರಿ ಈ ಕೋಲ ಸೇವೆಯನ್ನು ಮಾಡಿಸಿದ್ದಾರೆ ಎಂದು ವರದಿಯಾಗುತ್ತಿದೆ. ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ಕೋಲ ಸೇವೆಯನ್ನು ನೀಡಿದರು.
ಬರ್ಕಜೆಯಲ್ಲಿ ನವಗುಳಿಗ ದೈವಗಳು ನೆಲೆಯಾದ ಏಕೈಕ ಕ್ಷೇತ್ರವಾಗಿದೆ. ಇಲ್ಲಿ ಹರಕೆ ಹೊತ್ತರೆ ಭಕ್ತರ ಮನಸಂಕಲ್ಪ ಈಡೇರುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಹರೀಶ್ ಪೂಂಜಾ ಅವರು ಇಲ್ಲಿ ಹರಕೆ ಹೊತ್ತಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗುಳಿಗ ದೈವದ ಕೋಲ ಸೇವೆಯನ್ನು ಕಣ್ತುಂಬಿಕೊಂಡು ದೈವದ ಕೃಪೆಗೆ ಪಾತ್ರರಾದರು.
