


ಮಂಗಳೂರು: ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬುವವರು ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಆದರೆ ಮೃತರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ನ.23ರಂದು ಸಂಜೆ 4 ಗಂಟೆಗೆ ‘ಸೀಬರ್ಡ್’ ಬೋಟ್‌ನಲ್ಲಿ ಮನೋಜ್ ಹಾಗೂ ಇತರ ಐವರು ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಚಾಲಕ ಹೊರತುಪಡಿಸಿ ಉಳಿದ ಮೀನುಗಾರರು ಬಲೆ ಬೀಸಿದ ನಂತರ ಮಲಗಿದ್ದರು. ಸಂಜೆ 6.30ರ ಸುಮಾರಿಗೆ ಚಾಲಕ ಕ್ಯಾಬಿನ್ ಬಳಿ ಹೋದಾಗ ಮನೋಜ್ ನಾಪತ್ತೆಯಾಗಿರುವುದು ಕಂಡುಬಂದಿದೆ.
ಹುಡುಕಾಟ ನಡೆಸಿದಾಗ ಮನೋಜ್ ಅವರು ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮನೋಜ್ ಯಾವುದೋ ಕಾರಣಕ್ಕೆ ಬೋಟ್ ನ ಬಳಿ ತೆರಳಿದ್ದಾಗ ಸಮತೋಲನ ಕಳೆದುಕೊಂಡು ಸಮುದ್ರಕ್ಕೆ ಬಿದ್ದು ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

5’4″ ಎತ್ತರ, ಎಣ್ಣೆ ಗಪ್ಪು ಮೈಬಣ್ಣ ಹೊಂದಿದ್ದು , ಹಳದಿ ಮತ್ತು ಕಪ್ಪು ಗಾಢ ಗೆರೆಗಳಿರುವ ಟೀ ಶರ್ಟ್ ಮತ್ತು ಬೂದು ಬಣ್ಣದ ಶಾರ್ಟ್ಸ್ ಧರಿಸಿರುತ್ತಾರೆ. ವಾರಸುದಾರರು ಪಾಂಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.











