

ಹುಬ್ಬಳ್ಳಿ: ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ಖಾನ್ಫೆಬ್ರವರಿ 13ರಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಅಂದ್ರೆ ಮುಸಲ್ಮಾನರಲ್ಲಿ ಗೋಶಾಪರದ ಅಂತ ಹೇಳ್ತೇವೆ. ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು. ಹೆಣ್ಣುಮಕ್ಕಳು ತಮ್ಮ ರಕ್ಷಣೆಗಾಗಿ ಹಿಜಾಬ್ ಧರಿಸುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ದೇಹರಚನೆ ಕಾಣಿಸಬಾರದು. ದೇಹರಚನೆ ಹೊರಗೆ ಕಾಣಿಸಬಾರದು ಎಂದು ಹಿಜಾಬ್ ಬಳಸ್ತಾರೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದು ಭಾರತದಲ್ಲಿ. ಹಿಜಾಬ್ ಹಾಕದಿರುವ ಕಾರಣದಿಂದ ಇಂತಹ ಘಟನೆ ನಡೆದಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಹಿಜಾಬ್ ಧರಿಸುವುದು ಈಗಿನದ್ದಲ್ಲ, ಹಳೆಯ ಪದ್ಧತಿಯಾಗಿದೆ. ಯಾರು ಧರಿಸಬೇಕು ಅನಿಸುತ್ತೋ ಅವರು ಹಾಕಿಕೊಳ್ಳಬಹುದು. ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂಬ ನಿಯಮವಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಇನ್ನು ಹಿಜಾಬ್ ಹಾಕಿಕೊಳ್ಳುವ ಬಗ್ಗೆ ಎಂಎಲ್ಸಿ ಸಿಎಂ ಇಬ್ರಾಹಿಂ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಹಾಕಿಕೊಳ್ಳುವುದು ಮುಸ್ಲಿಂ ಸಮುದಾಯದ ಸಂಪ್ರದಾಯ. ಹಿಂದೂ ಧರ್ಮದಲ್ಲಿ ಮಹಿಳೆಯರು ತಲೆ ಮೇಲೆ ಸೆರಗು ಹಾಕುತ್ತಾರೆ. ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಹಾಕಿಕೊಳ್ಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.










