ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯಲು ರಾಜ್ಯ ಸರ್ಕಾರವೇ ಕಾರಣ. ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಅಕ್ಷಮ್ಯ. ಇದರಲ್ಲಿ ರಾಜಕಾರಣವಾಗಲೀ, ಸರ್ಕಾರ ಕ್ರಮಗಳ ವಿಚಾರದಲ್ಲಿ ಹಸ್ತಕ್ಷೇಪವಾಗಲೀ ಯಾರೂ ಮಾಡಬಾರದು. ಕಾನೂನಿನ ಕೆಲಸ ಆಗಬೇಕು. ಸರ್ಕಾರದ ವಿರುದ್ದವೇ ಜನರು ತಿರುಗಿ ಬಿದ್ದಿರುವುದನ್ನು ನಾವು ನಿನ್ನೆ ಗಮನಿಸಿದ್ದೇವೆ. ಸರ್ಕಾರದ ವೈಫಲ್ಯಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.
ಆರಂಭದಿಂದಲೇ ಸರ್ಕಾರ ಇಂತಹ ಪರಿಸ್ಥಿತಿಗಳನ್ನು ಮಟ್ಟ ಹಾಕಿದ್ದರೆ ರಾಜ್ಯದಲ್ಲಿ ದುಸ್ಥಿತಿಗಳು ಬಂದೆರಗುತ್ತಿರಲಿಲ್ಲ. ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಬೇಕು ಮತ್ತು ಆ ಕುಟುಂಬಕ್ಕೆ ನ್ಯಾಯ ದೊರಕಬೇಕು. ಕರಾವಳಿ ಭಾಗದಲ್ಲಿ ಮುಂದೆಂದೂ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿ ಸ್ಥಾಪಿಸಲಿ ಎಂದು ಆಶಿಸಿದರು. ಪೊಲೀಸರನ್ನು ಸ್ವತಂತ್ರವಾಗಿ ತನಿಖೆ ಮಾಡಲು ಬಿಡಬೇಕು. ಅವರ ಮೇಲೆ ರಾಜಕೀಯ ಒತ್ತಡ ಸಲ್ಲದು. ನಿನ್ನೆ ಸಂಜೆಯೇ ಬೆಳ್ಳಾರೆಗೆ ಭೇಟಿ ನೀಡಲು ನಿರ್ಧರಿಸಿದ್ದೆ. ಆದರೆ ಪರಿಸ್ಥಿತಿ ತಿಳಿಯಾದ ಬಳಿಕವೇ ಭೇಟಿ ನೀಡಲು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ ಕಾರಣ ಭೇಟಿಯನ್ನು ಮುಂದೂಡಿದ್ದೇನೆ ಎಂದವರು ತಿಳಿಸಿದರು.
ಜನಾಕ್ರೋಶಕ್ಕೆ ಹೆದರಿ ಸರ್ಕಾರಿ ಜನೋತ್ಸವ ರದ್ದುಗೊಳಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ. ಸರಿಯಾಗಿ ಆಡಳಿತ ನಡೆಸುತ್ತಿದ್ದಿದ್ದರೆ ಹೆದರುವ ಅವಶ್ಯಕತೆ ಇತ್ತೇ? ಆದರೆ ಸಾಧನೆ ಮಾಡದೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದೇ ತಪ್ಪು ಎಂದರು. ಕಾಂಗ್ರೆಸ್ಸಿಗರನ್ನು ಅನಗತ್ಯ ಎಳೆದು ತಂದು ರಾಜಕೀಯ ಮಾಡುವುದು ಬಿಜೆಪಿ ನಾಯಕರ ಹವ್ಯಾಸವಾಗಿದೆ. ಯಾವುದೇ ಪಕ್ಷದ ಕಾರ್ಯಕರ್ತರಿಗೂ ಗೌರವ ನೀಡಬೇಕು. ಸಿದ್ದಾಂತದ ಮೇಲೆ ಅವರು ಕೆಲಸ ಮಾಡುತ್ತಾರೆ. ಅವರ ಆಕ್ರೋಶದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬೇರೆ ಸಮಯದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬ ತೇಜಸ್ವಿ ಸೂರ್ಯ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಲ್ಲರಿಗೂ ರಕ್ಷಣೆ ನೀಡಲಾಗದಿದ್ದರೆ ಸರ್ಕಾರ ಯಾಕೆ ಇರಬೇಕು? ಮೈಸೂರಿನಲ್ಲಿ ಅತ್ಯಾಚಾರ ಆಗಿದ್ದಾಗ ಆ ಹೊತ್ತಲ್ಲಿ ಹೊರಗೆ ಹೋಗುವ ಅವಶ್ಯಕತೆ ಏನಿತ್ತು ಎಂದು ಗೃಹ ಸಚಿವರು ಪ್ರಶ್ನಿಸಿದ್ದರು. ಇಂತಹ ಅನಗತ್ಯ ಮಾತು ಸಲ್ಲದು ಎಂದರು.