
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಉತ್ತರದಲ್ಲಿ ಮತ್ತೆ ಕಮಲ ಅರಳಿಸಲು ಕಮಲ ಕಲಿಗಳಿಂದ ಈಗಿನಿಂದಲೇ ತಯಾರಿ ಶುರುವಾಗಿದೆ. ಬಿಜೆಪಿ ಚಾಣಕ್ಯ ಅಮಿತ್ ಶಾ ಯುಪಿಯಲ್ಲಿ ಠಿಕಾಣಿ ಹೂಡಿದ್ರೆ, ಪ್ರಧಾನಿ ಮೋದಿ ಸರಣಿ ಱಲಿಗಳನ್ನು ನಡೆಸ್ತಿದ್ದಾರೆ. ಕಮಲಕ್ಕೆ ಠಕ್ಕರ್ ಕೊಡಲು ಕೈ ಕೂಡ ರಾಜಕೀಯ ತಂತ್ರಗಾರಿಕೆ ರೂಪಿಸಿದೆ. ಹಾಗಾದ್ರೆ ಉತ್ತರದ ಅಖಾಡದಲ್ಲಿ ಬಿಜೆಪಿ ಯಾವ ರೀತಿಯ ಸಿದ್ಧವಾಗ್ತಿದೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆ ಕೈ- ಸಮಾಜವಾದಿ ಪಡೆಗಳು ಫುಲ್ ಆ್ಯಕ್ಟಿವ್ ಆಗಿವೆ. ಆದ್ರಲ್ಲೂ ಬಿಜೆಪಿ ಶರವೇಗದ ರೀತಿ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸಲು ಪಣತೊಟ್ಟಿದೆ. ಈಗಾಗಲೇ ಯುಪಿಯಲ್ಲಿ ಠಿಕಾಣಿ ಹೂಡಿರುವ ಅಮಿತ್ ಶಾ ತಮ್ಮ ಹಳೆ ಶೈಲಿಯ ರಾಜಕೀಯ ಚಾಣಕ್ಷತನವನ್ನು ಮುಂದುವರೆಸಿದ್ದಾರೆ.
ಯುಪಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿಸಲು ಅಮಿತ್ ಶಾ ತಮ್ಮ ಹಳೆ ಸಂಘಟನಾ ಶೈಲಿಯನ್ನು ಮುಂದುವರೆಸಿದ್ದಾರೆ. ಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆಯೂ ಅಮಿತ್ ಶಾ ಈಗಿನಿಂದಲೇ ತಲೆಕೆಡಿಸಿಕೊಂಡಿದ್ದಾರೆ. ಹಗಲಿನಲ್ಲಿ ಱಲಿ ನಡೆಸಿ, ರಾತ್ರಿ ವೇಳೆ ಗುಪ್ತ ಸಭೆಗಳನ್ನು ನಡೆಸುವ ಮೂಲಕ ಹಳೆ ರಾಜಕೀಯ ತಂತ್ರಗಾರಿಕೆ ಶುರು ಮಾಡಿದ್ದಾರೆ. ಈಗಾಗಲೇ ಕಾಶಿ, ಅವಧ್ ಮತ್ತು ರೋಹಿಲ್‌ಖಂಡ್ ಪ್ರದೇಶಗಳಲ್ಲಿ ರಾತ್ರಿ, ಹಗಲಿನ ಚುನಾವಣಾ ಸಮರಭ್ಯಾಸ ನಡೆಸಿದ್ದಾರೆ.

ಯುಪಿ ಚುನಾವಣೆಯ ಸಂಪೂರ್ಣ ಜವಬ್ದಾರಿಯನ್ನು ಅಮಿತ್ ಶಾ ವಹಿಸಿಕೊಂಡಿದ್ದು, ಹಗಲಿರುಳಿನ ರಾಜಕೀಯ ಆಟ ಆರಂಭಿಸಿದ್ದಾರೆ. ಮೊನ್ನೆ ನಡೆದ ಜನ ವಿಶ್ವಾಸ ಯಾತ್ರೆ ಬಳಿಕ ಅಮಿತ್ ಶಾ ಕಾಶಿಯಲ್ಲಿ ಉಳಿದು ಶಾಸಕರು, ಸಂಸದರ ಜೊತೆ ಟಿಕೇಟ್ ಹಂಚಿಕೆ ಬಗ್ಗೆ ಮಹತ್ವದ ಸಭೆ ನಡೆಸಿದ್ದಾರೆ. ಇಂದು ಮೊರಾದಾಬಾದ್, ಅಲಿಗಢ ಮತ್ತು ಉನ್ನಾವೊದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಲಖನೌದಲ್ಲಿ ರಾತ್ರಿ ಸಭೆ ನಡೆಸಲಿದ್ದಾರೆ. ನಾಳೆ ಅಯೋಧ್ಯೆ, ಸಂತ ಕಬೀರ ನಗರ ಮತ್ತು ಗೋರಖ್‌ಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಬಳಿಕ ಬರೇಲಿಯಲ್ಲಿ ಮಹತ್ವದ ಸಭೆಗಳನ್ನು ಆಯೋಜಿಸಿದ್ದಾರೆ.

2014ರ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದ ‘ಅಮಿತ್ ಶಾ’
ಆ ಚುನಾವಣೆಯಲ್ಲಿ ಫಲ ನೀಡಿದ್ದ ಹಗಲಿರುಳಿನ ತಂತ್ರಗಾರಿಕೆ
2014ರ ಯುಪಿ ಲೋಕಸಭಾ ಚುನಾವಣೆಯಲ್ಲಿ ಇಡೀ ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳುವ ಮೂಲಕ ಅಮಿತ್ ಶಾ ಯಶಸ್ಸು ಕಂಡಿದ್ರು. ಆ ಸಮಯದಲ್ಲಿ ಅಮಿತ್ ಶಾ ರಾಯ್ ಬರೇಲಿ, ಸುಲ್ತಾನ್‌ಪುರ, ಶಹಜಾನ್‌ಪುರದಂತಹ ರಾಜಕೀಯದ ಪ್ರಮುಖ ಜಿಲ್ಲೆಗಳಲ್ಲಿ ಉಳಿದು ರಾತ್ರಿ ಸಭೆಗಳನ್ನೂ ನಡೆಸುವ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ರು. ಈಗ ಅದೇ ಶೈಲಿಯ ರಾಜಕೀತ ರಣತಂತ್ರದ ಹಾದಿಯನ್ನು ಅನುಸರಿಸಿದ್ದಾರೆ.

ಬಿಜೆಪಿ ವಿಶ್ವಾಸ ಯಾತ್ರೆಗೆ ಸಮಾಜವಾದಿ ಠಕ್ಕರ್
ಸಮಾಜವಾದಿ ಪಕ್ಷದಿಂದ ವಿಜಯ ರಥಯಾತ್ರೆ
ಯುಪಿಯಲ್ಲಿ ಬಿಜೆಪಿಯ 6 ಜನರ ವಿಶ್ವಾಸ ಯಾತ್ರೆಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಠಕ್ಕರ್ ಕೊಡಲು ಸಮಾಜವಾದಿ ಪಕ್ಷ ವಿಜಯ ರಥಯಾತ್ರೆ ಆರಂಭಿಸಿದೆ. ಇದರ ನಡುವೆ ಕಮಲಕ್ಕೆ ಸೋಲುಣಿಸಿ ಉತ್ತರಾಧಿಪತ್ಯ ಸಾಧಿಸಲು ಕೈ ಕಟ್ಟಾಳು ಪ್ರಿಯಾಂಕ ಗಾಂಧಿ ಕಸರತ್ತು ನಡೆಸಿದ್ದಾರೆ. ಉತ್ತರದಲ್ಲಿ ಕಮಲ ಅರಳಿಸಲು ಸ್ವತಃ ಪ್ರಧಾನಿ ಮೋದಿಯೇ ಅಖಾಡಕ್ಕೆ ಧುಮುಕಿದ್ದು ಸರಣಿ ಱಲಿಗಳನ್ನು ಆಯೋಜನೆ ಮಾಡ್ತಿದ್ದಾರೆ. ಒಟ್ಟಾರೆ ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಕೈ ಕಮಲ ಜೊತೆಗೆ ಸಮಾಜವಾದಿ ಪಾರ್ಟಿ ಸ್ಫರ್ಧಾಳುಗಳು ಚುನಾವಣಾ ಅಖಾಡದಲ್ಲಿ ಸೆಣಸಾಡಲಿದ್ದು, ಉತ್ತರದ ಮತದಾರ ಕೈ ಹಿಡಿತನಾ..? ಇಲ್ಲ ಕಮಲ ಅರಳಿಸುತ್ತಾನ ಕಾದುನೋಡಬೇಕಿದೆ.










