
ಚೆನ್ನೈ: ಭಾರತದ ಶ್ರೀಮಂತ ದೇವರೆಂದೇ ಖ್ಯಾತನಾಗಿರುವ ವೆಂಕಟೇಶ್ವರ ಸ್ವಾಮಿಗೆ ಪ್ರತಿ ವರ್ಷವೂ ಕೋಟ್ಯಂತರ ರೂ. ದೇಣಿಗೆ ಹರಿದುಬರುತ್ತದೆ. ಇದೀಗ ಚೆನ್ನೈನ ವೃದ್ಧೆಯೊಬ್ಬರು ತಿರುಪತಿ ತಿಮ್ಮಪ್ಪನಿಗೆ 3.2 ಕೋಟಿ ರೂ. ನಗದು, 6 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ತಮ್ಮ ಮನೆಯನ್ನು ದಾನ ಮಾಡಿದ್ದಾರೆ. ಮದುವೆಯಾಗದ ಹಿನ್ನೆಲೆಯಲ್ಲಿ ಡಾ. ಪಾರ್ವತಮ್ಮ ಅವರಿಗೆ ಯಾವುದೇ ಕುಟುಂಬಸ್ಥರಿಲ್ಲ. ಹೀಗಾಗಿ, ಅವರು ತಮ್ಮ ಆಸ್ತಿಯನ್ನು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಾನ ಮಾಡಲು ಬಯಸಿದ್ದರು. ಅವರು ಇತ್ತೀಚೆಗೆ ಕೊನೆಯುಸಿರೆಳೆದಿದ್ದರಿಂದ ಅವರ ಸಹೋದರಿ ಪಾರ್ವತಮ್ಮನವರ ಆಸ್ತಿಯನ್ನು ಟಿಟಿಡಿಗೆ ನೀಡಿದ್ದಾರೆ.

ಪಾರ್ವತಮ್ಮ ಎಂಬ 76 ವರ್ಷದ ವೃದ್ಧೆ ತಿರುಮಲ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿದ್ದು, ಕೆಲವು ದಿನಗಳ ಹಿಂದೆ ಮರಣ ಹೊಂದಿದ್ದರು. ಅವರು ತಮ್ಮ ಆಸ್ತಿಯನ್ನು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡವರಿಗೆ ಚಿಕಿತ್ಸೆ ನೀಡುವ ಗುರಿ ಹೊಂದಿರುವ ಎಸ್‌ವಿ ಪ್ರಾಣದಾನ ಟ್ರಸ್ಟ್‌ನ ಸಹಾಯದಿಂದ ಟ್ರಸ್ಟ್‌ನಿಂದ ಪೀಡಿಯಾಟ್ರಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಆಕೆಯ ಸಾವಿನ ಬಳಿಕ ಆಕೆಯ ಸಹೋದರಿ ಡಾ. ರೇವತಿ ವಿಶ್ವನಾಥಂ ಅವರು ಪಾರ್ವತಮ್ಮನವರ ಆಸ್ತಿಯನ್ನು ಟಿಟಿಡಿ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ.

ರೇವತಿ ವಿಶ್ವನಾಥಂ, ಅವರ ಪತಿ ಪಿ.ಎ ವಿಶ್ವನಾಥನ್ ಮತ್ತು ತಮ್ಮ ಸಹೋದರಿಯ ಉಯಿಲಿನ ನಿರ್ವಾಹಕ ವಿ. ಕೃಷ್ಣನ್ ಅವರು ಇಂದು ತಿರುಮಲ ದೇವಸ್ಥಾನದಲ್ಲಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರಿಗೆ ಆಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದರು. ಇತ್ತೀಚೆಗೆ ನಿಧನರಾದ ಚೆನ್ನೈನ 76 ವರ್ಷದ ಭಕ್ತೆ ಪಾರ್ವತಮ್ಮ ತಿರುಪತಿಯ ವೆಂಕಟೇಶ್ವರನ ದೇಗುಲಕ್ಕೆ ಒಟ್ಟು 9.2 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ದೇಣಿಗೆಯಾಗಿ ನೀಡಲಾಗಿರುವ 9.2 ಕೋಟಿ ರೂ. ಹಣವನ್ನು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯು ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಪಾರ್ವತಮ್ಮನವರ ಸಹೋದರಿ ರೇವತಿ ವಿಶ್ವನಾಥಂ ಟಿಟಿಡಿಗೆ ಮನವಿ ಮಾಡಿದ್ದಾರೆ.

