

ಪುತ್ತೂರು: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತೆಲುಗು ಸಿನಿಮಾದಲ್ಲಿ ಪುತ್ತೂರಿನ ಪುಟಾಣಿ ಪ್ರತಿಭೆ ಆಜ್ಞಾ ರೈ ಬಣ್ಣ ಹಚ್ಚಿದ್ದಾರೆ. ಕ್ರೇಜಿ ಆಂಟ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ, ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿರುವ, ಬಾಹುಬಲಿ 2 ಚಿತ್ರದ ನಟ ರಾಕೇಶ್ ವರ್ರೆ ನಟನಾಗಿ ಮತ್ತು ಮಧುಮಿತಾ ನಾಯಕಿಯಾಗಿ ನಟಿಸುತ್ತಿರುವ `ಒಕ್ಕಟೆ ಆಶಾ’ ಎಂಬ ಸಿನಿಮಾದಲ್ಲಿ ಆಜ್ಞಾ ರೈ ಅಭಿನಯಿಸುತ್ತಿದ್ದಾರೆ.

ನಾಯಕ ಮತ್ತು ನಾಯಕಿಯ ಮುದ್ದಿನ ಮಗಳಾಗಿ ಬಣ್ಣ ಹಚ್ಚಿರುವ ಆಜ್ಞಾ ರೈ ನಟನೆಯ ಮೂಲಕ ಶೂಟಿಂಗ್ ಸೆಟ್ನಲ್ಲಿ ಆಕರ್ಷಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ವಿವಿಧ ಪ್ರಮುಖ ಸ್ಥಳಗಳಲ್ಲಿ ಭರದಿಂದ ನಡೆಯುತ್ತಿದ್ದು ಆಜ್ಞಾ ರೈ ಅಭಿನಯಿಸಿ ಚಿತ್ರ ತಂಡದಿoದ ಭೇಷ್ ಎನಿಸಿಕೊಂಡಿದ್ದಾರೆ.

ಉದ್ಯಮಿಯಾಗಿರುವ ಕುರಿಯದ ಜಯರಾಮ್ ರೈ ಮತ್ತು ಪತ್ರಕರ್ತೆಯಾಗಿರುವ ಹೇಮಾ ಜಯರಾಮ್ ರೈಯವರ ಪುತ್ರಿಯಾಗಿದ್ದು, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಯೋಗ, ಸಂಗೀತ, ಭರತನಾಟ್ಯ, ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೂಡ್ಲಿಗಿಯ ಗುರುದೇವ ಗುರುಕುಲದ ಶಶಿಧರ್ ಗುರೂಜಿಯವರಿಂದ ಭಗವದ್ಗೀತಾ ಪಠಣ, ನಿತ್ಯ ಶ್ಲೋಕಗಳು, ವಿವೇಕ ಮೆಮೊರಿ, ಗಾಂಧಾರಿ ವಿದ್ಯೆಯಂತಹ ಧಾರ್ಮಿಕ ಶಿಕ್ಷಣವನ್ನು ಪಡೆದಿರುವ ಕುಮಾರಿ ಆಜ್ಞಾ ರೈಯವರು ಆರ್ಯಭಟ ಪ್ರಶಸ್ತಿ ಪುರಸ್ಕೃತರೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಜಗದೀಶ್ ಪುತ್ತೂರು ಅವರ ಹರಿಕುಣಿದ ಭಕ್ತಿ ಗಾಯನ, ಕರುನಾಡ ಗಾನ ಗಂಧರ್ವ ಬಿರುದಾಂಕಿತ ಮಿಧುನ್ ರಾಜ್ ವಿದ್ಯಾಪುರ ಇವರ ನವಶಕ್ತಿ ವೈಭವ, ವರ್ಣ ಕಲಾರತ್ನ ಬಿರುದಾಂಕಿತ ಪ್ರೇಮ್ ರಾಜ್ ಆರ್ಲಪದವು ನಿರ್ದೇಶನದ ದೇಶಭಕ್ತಿಯನ್ನು ಸಾರುವ ಆಲ್ಬಂ ಸಾಂಗ್ ಗಳಲ್ಲಿ ಅಭಿನಯಿಸಿದ್ದಾರೆ. `ಗೇನದಾಂತಿ ಉಡಲ್’ ಎನ್ನುವ ತುಳು ಕಿರುಚಿತ್ರದಲ್ಲೂ ನಟಿಸಿದ್ದಾರೆ.












