





ವಿಟ್ಲ: ಪೆರುವಾಯಿ ಜಂಕ್ಷನ್ ವ್ಯಾಪ್ತಿಯ ಪೇರಡ್ಕ ಮತ್ತು ಮಾಣಿಲ ಸಂಪರ್ಕ ಸೇತುವೆಗಳ ಪುನರ್ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಇಂದು ಪೆರುವಾಯಿಯಲ್ಲಿ ಬೃಹತ್ ರಸ್ತೆ ತಡೆ ಮತ್ತು ಶಾಂತಿಯುತ ಪ್ರತಿಭಟನೆ ನಡೆಸಿದರು. ಅಪಾಯದ ಅಂಚಿನಲ್ಲಿರುವ ಈ ಸೇತುವೆಗಳು ಹಾಗೂ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ಈ ಸಂದರ್ಭದಲ್ಲಿ ನಡೆಯಿತು.
ಪೆರುವಾಯಿ ಜಂಕ್ಷನ್ ಬಳಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ, ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಪೇರಡ್ಕ ಸೇತುವೆ ಹಾಗೂ ಪೆರುವಾಯಿ ಜಂಕ್ಷನ್‌ನಿಂದ 150 ಮೀಟರ್ ದೂರದಲ್ಲಿರುವ ಪೆರುವಾಯಿ – ಮಾಣಿಲ ರಸ್ತೆಯ ಸೇತುವೆ ಈ ಭಾಗದ ಜನರ ಪ್ರಮುಖ ಜೀವನಾಡಿಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೃಷಿಕರು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಆದರೆ, ದಶಕಗಳ ಹಿಂದೆ ನಿರ್ಮಾಣಗೊಂಡ ಈ ಕಿರಿದಾದ ಸೇತುವೆಗಳು ಇಂದು ಸಂಪೂರ್ಣ ಸಾಮರ್ಥ್ಯ ಕಳೆದುಕೊಂಡಿವೆ. ವಾಹನಗಳ ಸಂಚಾರ ಹೆಚ್ಚಾಗಿದ್ದರೂ ಸೇತುವೆಗಳ ಅಗಲ ಮಾತ್ರ ಅಂದಿನಂತೆಯೇ ಇದೆ. ಮಳೆಗಾಲದಲ್ಲಿ ಪೇರಡ್ಕ ಸೇತುವೆಯ ಮೇಲೆಯೇ ನೀರು ಹರಿಯುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಇದೆ.
ಕಳೆದ 3 ವರ್ಷಗಳಲ್ಲಿ 10ಕ್ಕೂ ಹೆಚ್ಚು ಅಪಘಾತಗಳು ನಡೆದಿದ್ದು, ಇತ್ತೀಚೆಗಷ್ಟೇ ಕೋಳಿ ಸಾಗಾಟದ ವಾಹನ ಹಾಗೂ ಐವರು ಯುವಕರಿದ್ದ ಆಲೊ ಕಾರು ಸೇತುವೆಯಿಂದ ಕೆಳಗೆ ಬಿದ್ದಿದ್ದವು. ಅಪಾಯಕಾರಿ ತಿರುವಿನಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಲವು ವಾಹನಗಳು ನಜ್ಜುಗುಜ್ಜಾಗಿವೆ. ದೊಡ್ಡ ದುರಂತ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ತೀವ್ರತೆ ಅರಿತು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಬಂಟ್ವಾಳ ವಿಭಾಗದ ಇಂಜಿನಿಯರ್ ತಾರಾನಾಥ್ ಮತ್ತು ಮಂಗಳೂರು ವಿಭಾಗದ ಇಂಜಿನಿಯರ್ ವೇಣುಗೋಪಾಲ್ ಅವರನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ತೀವ್ರ ತರಾಟೆಗೆ ತೆಗೆದುಕೊಂಡರು. ಕೆಲ ದಿನಗಳ ಹಿಂದೆ ನೀಡಿದ್ದ ಗಡುವಿಗೆ ಕೇವಲ ಒಂದು ಲೋಡ್ ಕೆಂಪು ಕಲ್ಲುಗಳನ್ನು ತಂದು ಸುರಿದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇದು ಸುರಕ್ಷತಾ ಕ್ರಮವಲ್ಲ, ಜನರ ಕಣ್ಣಿಗೆ ಮಣ್ಣೆರಚುವ ತಂತ್ರ” ಎಂದು ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರ ತೀವ್ರ ಪ್ರತಿರೋಧದ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ವೇಣುಗೋಪಾಲ್, “ಒಂದು ವಾರದಲ್ಲಿ ತಡೆಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು. 15 ದಿನಗಳ ಒಳಗಾಗಿ ತಡೆಗೋಡೆ ಕಾಮಗಾರಿಯನ್ನು ಆರಂಭಿಸುತ್ತೇವೆ” ಎಂದು ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವಿನಾಶ್ ಮಾತನಾಡಿ, ಈಗಾಗಲೇ ಹೊಸ ಸೇತುವೆಯ ನಿರ್ಮಾಣಕ್ಕೆ ಹಾಗೂ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಹಂತದಲ್ಲಿ ಮಂಜೂರಾತಿ ದೊರೆತ ತಕ್ಷಣ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಪ್ರಮುಖ ಬೇಡಿಕೆಗಳು:
*ಪೇರಡ್ಕ ಸೇತುವೆ ಸ್ಥಳದಲ್ಲಿ ಅಪಾಯಕಾರಿ ತಿರುವುಗಳನ್ನು ತೆರವುಗೊಳಿಸಿ, ವಿಶಾಲವಾದ ಹಾಗೂ ನೇರ ಸಂಪರ್ಕ ರಸ್ತೆಯೊಂದಿಗೆ ನೂತನ ಸೇತುವೆ ನಿರ್ಮಿಸಬೇಕು.
*ಪೆರುವಾಯಿ-ಮಾಣಿಲ ಸಂಪರ್ಕ ಸೇತುವೆಯನ್ನು ತೆರವುಗೊಳಿಸಿ, ಆಧುನಿಕ ವಿನ್ಯಾಸದೊಂದಿಗೆ ವಿಶಾಲ ಮತ್ತು ಸುರಕ್ಷಿತ ನೂತನ ಸೇತುವೆಯಾಗಿ ಪುನರ್‌ನಿರ್ಮಿಸಬೇಕು.
*ಪೆರುವಾಯಿಯಿಂದ ಬಾಳಶೆಟ್ಟಿ ಮೂಲೆ ಮೂಲಕ ಕನ್ಯಾನ ತನಕದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಗೆ ಹಸ್ತಾಂತರಿಸಿ, ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು.
*ಹತ್ತು ವರ್ಷಗಳ ಹಿಂದೆ ಬಾಕಿ ಉಳಿದಿದ್ದ ಓಣಿಬಾಗಿಲಿನಿಂದ ಪಕಳಕುಂಜ ತನಕದ ರಸ್ತೆಯನ್ನು ತಕ್ಷಣವೇ ಅಗಲೀಕರಣಗೊಳಿಸಬೇಕು.
“ನಾವು ಇಲಾಖಾಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಭಿಕ್ಷೆ ಬೇಡುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ” ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು. 10 ವರ್ಷಗಳ ಹಿಂದೆ ಇದೇ ತಂಡವು ಮುಳಿಯ ಎಂಬಲ್ಲಿ ಭಾರಿ ಮಟ್ಟದ ರಸ್ತೆ ತಡೆ ನಡೆಸಿ ಯಶಸ್ಸು ಸಾಧಿಸಿತ್ತು ಎಂಬುದನ್ನು ನೆನಪಿಸಿದ ಅವರು, ಈ ಬಾರಿ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರವನ್ನು ಬಂದ್ ಮಾಡಿ ತೀವ್ರ ಸ್ವರೂಪದ ಪ್ರಜಾಪ್ರಭುತ್ವದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಪ್ರತಿಭಟನೆಯ ಸಾಮೂಹಿಕ ನಾಯಕತ್ವವನ್ನು ಯತೀಶ್ ಪೆರುವಾಯಿ, ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಮೋಕ್ಷಿತ್ ಪೆರುವಾಯಿ, ಮಂಜುನಾಥ ಆಚಾರ್ಯ ಅಶ್ವಥನಗರ, ಪ್ರಭಾಕರ ಶೆಟ್ಟಿ ಕಳಾಯ್ತಿಮಾರ್, ವಿನೀತ್ ಶೆಟ್ಟಿ ಕಾನ, ಅಶೋಕ್ ಮಾಣಿಲ,ಎಂ ಮಹಾಬಲ ಭಟ್ ಮುರುವ, ವಿಷ್ಣು ಕನ್ನಡಗುಳಿ, ಪ್ರಕಾಶ್ಚಂದ್ರ ಶೆಟ್ಟಿ ಎ ಕೆ ನಿಲಯ, ಶೇಖರ ಪೂಜಾರಿ ಕುಂಬಳಕೋಡಿ, ರಾಘವ ಮಾಸ್ಟರ್ ಬೆರಿಪದವು, ಗಿರೀಶ್ ಪಾಟಾಳಿ, ಮನೋಜ್ ಆಚಾರ್ಯ ಪೆರುವಾಯಿ, ಸವಿತಾ ಆಚಾರ್ಯ ಅಶ್ವಥನಗರ, ಸೂರ್ಯ ಪ್ರಭಾ ಎ ಕೆ ನಿಲಯ ವಹಿಸಿದ್ದರು.








