

ಬೆಳ್ತಂಗಡಿ: ಇಲ್ಲಿನ ಶಿಶಿಲ ಗ್ರಾಮದ ಬಾಳೆಗುಂಡಿಯಲ್ಲಿ ವ್ಯಕ್ತಿಯೋರ್ವ ತಾನು ವಿಷ ಸೇವಿಸಿ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಬೆರಿಸಿಕೊಟ್ಟ ಘಟನೆ ನಡೆದಿದೆ. ವಿಷ ಸೇವಿಸಿ ಮಕ್ಕಳಿಗೂ ವಿಷ ನೀಡಿದ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿ ನಿವಾಸಿ ವಿಶ್ವನಾಥ ಎಂದು ಗುರುತಿಸಲಾಗಿದೆ.

ವಿಶ್ವನಾಥ ಕುಡಿತದ ಚಟಹೊಂದಿದ್ದು , ಕುಡಿದು ಬಂದು ಪತ್ನಿ ಚಂದ್ರಾವತಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಆರೋಪಿ ವಿಶ್ವನಾಥ ಅಪ್ರಾಪ್ತ ಮಕ್ಕಳಿಗೆ ಜ್ಯೂಸ್ ನೀಡಿದ್ದು, ಓರ್ವ ಮಗ ಜ್ಯೂಸ್ ಬೇಡವೆಂದು ನಿರಾಕರಿಸಿದ್ದು, ಇನ್ನೋರ್ವ ಮಗನಿಗೆ ಒತ್ತಾಯ ಪೂರ್ವಕವಾಗಿ ಜ್ಯೂಸ್ ಕುಡಿಸಿದ್ದ, ಈ ಬಗ್ಗೆ ಹೆಂಡತಿ ಪ್ರಶ್ನಿಸಿದಾಗ ವಿಶ್ವನಾಥ ‘ನಾನು ಜ್ಯೂಸ್ ನಲ್ಲಿ ಮಗನಿಗೆ ವಿಷ ಬೆರೆಸಿ ಕುಡಿಸಿದ್ದೇನೆ ಅಷ್ಟೇ ಅಲ್ಲದೇ ನಾನು ಕೂಡ ವಿಷ ಕುಡಿದಿದ್ದೇನೆ’ ಎಂದು ಹೇಳಿದ್ದಾನೆ.

ಗಾಬರಿಗೊಂಡ ಚಂದ್ರಾವತಿ ಚಿಕ್ಕ ಮಗನನ್ನು ಮತ್ತು ಗಂಡ ವಿಶ್ವನಾಥನನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರಿಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪತಿ ವಿರುದ್ಧವೇ ಪತ್ನಿ ಚಂದ್ರಾವತಿ ದೂರು ದಾಖಲಿಸಿದ್ದಾಳೆ. ಆರೋಪಿಯು ಕೊಲ್ಲುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









