

ಮಂಗಳೂರು: ಖ್ಯಾತ ಸ್ಯಾಕ್ಸೋಫೋನ್ ಕಲಾವಿದೆ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಕ್ತಿನಗರ ಬಳಿ ನಿನ್ನೆ ರಾತ್ರಿ ನಡೆದಿದೆ. ಮೃತಳನ್ನು ಸುಜಾತ ದೇವಾಡಿಗ (29) ಎಂದು ಗುರುತಿಸಲಾಗಿದೆ.

ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿನಗರದ ಫ್ಲಾಟ್ವೊಂದರಲ್ಲಿ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಕಾರ್ಯಕ್ರಮ ಮುಗಿಸಿ ಬಂದು ಮನೆಯವರೊಡನೆ ತಲೆನೋವು ಎಂದು ಹೇಳಿ ರೂಂ ನಲ್ಲಿ ಫ್ಯಾನ್ ಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 9 ಗಂಟೆಯಾದರೂ ಕೋಣೆಯಿಂದ ಹೊರಗೆ ಬಾರದಿದ್ದುದನ್ನು ಕಂಡು ಪತಿ ನಿತಿನ್ ಕಿಟಕಿಯಿಂದ ನೋಡಿದಾಗ ಸುಜಾತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಉತ್ತಮ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದ ಈಕೆಗೆ ಕೊರೋನಾದಿಂದ ಕಾರ್ಯಕ್ರಮಗಳು ಸಿಗದೆ ಹೋದುದ್ದರಿಂದ ಮಾನಸಿಕವಾಗಿ ಕುಗ್ಗಿದ್ದರು. ಜೊತೆಗೆ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದನ್ನು ತಾಳಲಾರದೆ ಮನನೊಂದು ಆತ್ಮಹತ್ಯೆ ಗೈದಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಇವರು ಪತಿ ಹಾಗೂ ಎರಡೂವರೆ ವರ್ಷದ ಮಗುವನ್ನು ಅಗಲಿದ್ದಾರೆ. ತನಿಖೆ ಮುಂದುವರೆದಿದೆ.










