
ಉಡುಪಿ: ಪೊಲೀಸ್ ವಶದಲ್ಲಿದ್ದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪೆರ್ಡೂರು ಸಮೀಪದ ನಾಯರಕೋಡು ನಿವಾಸಿ ಪ್ರದೀಪ್ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಮಧ್ಯಪ್ರವೇಶಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದು, ಆಯೋಗವು ಡೈರಿ ಸಂಖ್ಯೆ 25715/IN/2026ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ಅಲ್ಲದೆ, ಕರ್ನಾಟಕ ರಾಜ್ಯದ ಉಸ್ತುವಾರಿ ಹೊಂದಿರುವ ಆಯೋಗದ ಸದಸ್ಯರಿಗೂ ಈ ಕುರಿತು ಮಾಹಿತಿ ರವಾನಿಸಲಾಗಿದೆ.ದೂರಿನಲ್ಲಿ ಪ್ರದೀಪ್ ಪೂಜಾರಿ ಅವರನ್ನು ಪ್ರಸನ್ನ ಶೆಟ್ಟಿ ಹಾಗೂ ಅವರ ಸಹಚರರು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮರದ ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಹಿರಿಯಡ್ಕ ಠಾಣೆಯ ಪೊಲೀಸರು ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆಯುವ ಬದಲು ಗಾಯಾಳು ಪ್ರದೀಪ್ ಅವರನ್ನೇ ವಶಕ್ಕೆ ಪಡೆದು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಹಲ್ಲೆಕೋರರ ವಿರುದ್ಧ ಎಫ್ಐಆರ್ ದಾಖಲಿಸಲು ಪ್ರದೀಪ್ ಹಾಗೂ ಅವರ ಸಹೋದರ ದಿಲೀಪ್ ಪೂಜಾರಿ ಮುಂದಾದಾಗ, ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಅವರು ದೂರು ಸ್ವೀಕರಿಸಲು ನಿರಾಕರಿಸಿ ಬೆದರಿಕೆ ಹಾಕಿದ್ದರು ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ.
ಸೂಕ್ತ ವೈದ್ಯಕೀಯ ನೆರವು ಮತ್ತು ಕಾನೂನು ರಕ್ಷಣೆ ದೊರೆಯದೆ, ಪೊಲೀಸರ ಪಕ್ಷಪಾತ ಹಾಗೂ ಬೆದರಿಕೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಪ್ರದೀಪ್ ಅವರು ಅಕ್ಟೋಬರ್ 30ರಂದು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.








