


ಮಂಗಳೂರು: ಹೋಳಿ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಂಗ್ ದೇ ಬರ್ಸಾ’ ಹೆಸರಿನ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ. ಮರೋಳಿಯ ಸಾರ್ವಜನಿಕ ಮೈದಾನದಲ್ಲಿ ಇಂದು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದು ‘ರಂಗ್ ದೇ ಬರ್ಸಾ’ ಹೆಸರಿನಲ್ಲಿ ಹೋಲಿ ಆಚರಣೆ ಆಯೋಜಿಸಿತ್ತು. ಇದಕ್ಕೆ ಸಾರ್ವಜನಿಕವಾಗಿ ಪ್ರಚಾರ, ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಕೂಡಾ ಹಾಕಲಾಗಿತ್ತು ಎನ್ನಲಾಗಿದೆ.
ಈ ವೇಳೆ ಆಯೋಜಕರ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ದಾಂಧಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಆರು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೋಳಿ ಆಚರಣೆಯ ಸಲುವಾಗಿ ಯುವಕ ಯುವತಿಯರು ಸೇರಿ ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಯುವಕರು ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ. ಅನ್ಯಕೋಮಿನ ಯುವಕರೊಂದಿಗೆ ಕುಣಿಯುತ್ತಿದ್ದೀರಿ ಎಂದು ಆರೋಪಿಸಿದ್ದರು. ಈ ವೇಳೆ ಪಾರ್ಟಿ ಆಯೋಜಕರ ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಬಳಿಕ ದಾಳಿ ನೆಪದಲ್ಲಿ ಬ್ಯಾನರ್ ಹರಿದು ದಾಂಧಲೆ ನಡೆಸಿದ್ದಾರೆ ಹಾಗೂ ಅಶ್ಲೀಲವಾಗಿ ವರ್ತಿಸಿದ್ದಾರೆ ಎನ್ನುವ ಆರೋಪದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರು ಮಂದಿ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟು ಹೊತ್ತಿಗೆ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ಹೊರಟು ಹೋಗಿದ್ದರು. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.