ಚಿಕ್ಕಮಗಳೂರು : ದೇವಸ್ಥಾನ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕನಿಗೆ ಅವಾಚ್ಯವಾಗಿ ನಿಂದಿಸಿ, ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಬಾಲಕ ನೀಡಿದ ದೂರಿನ ಪ್ರಕಾರ, ಆಗಸ್ಟ್ 5ರಂದು ಮಧ್ಯಾಹ್ನ ಸ್ನೇಹಿತನನ್ನು ಬಸ್ಗೆ ಹತ್ತಿಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಗ್ರಾಮದ ವಿಜಯ ಅಲಿಯಾಸ್ ವಿಜಯರಾಜ್ ಎಂಬಾತ ಹಿಂದಿನಿಂದ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಬಾಲಕನ್ನು ಪಕ್ಕಕ್ಕೆ ಎಳೆದ ಪರಿಣಾಮ ಅನಾಹುತ ತಪ್ಪಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ದೇವಸ್ಥಾನಕ್ಕೆ ಪ್ರವೇಶಿಸಿದ ವಿಚಾರವನ್ನು ಮುಂದಿಟ್ಟುಕೊಂಡು ತನ್ನ ಜಾತಿಯನ್ನು ಉಲ್ಲೇಖಿಸಿ ಅವಾಚ್ಯವಾಗಿ ನಿಂದಿಸಿ, ಗ್ರಾಮದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿ ಮತ್ತೆ ಕತ್ತಿಯಿಂದ ಹಲ್ಲೆಗೆ ಯತ್ನಿಸಿದಾಗ ಮತ್ತೊಬ್ಬ ವ್ಯಕ್ತಿ ವಿಜಯನನ್ನು ತಡೆದಿದ್ದಾನೆ ಎಂದು ಹೇಳಲಾಗಿದೆ.
ಘಟನೆಯ ಸಂದರ್ಭದಲ್ಲಿ ಬಾಲಕ ಭಯದಿಂದ ಮೊಬೈಲ್ನಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಇದೇ ವೇಳೆ ಗ್ರಾಮದ ಶ್ವೇತಾ ಎಂಬುವರು ಬಾಲಕನ ಬಳಿ ಇರುವ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡುವಂತೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆಗಸ್ಟ್ 7ರಂದು ಸಂತ್ರಸ್ತ ಬಾಲಕ ನೀಡಿದ ದೂರನ್ನು ಸ್ವೀಕರಿಸಿರುವ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








