

ಮಂಗಳೂರು: ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ವಿಚಾರವಾಗಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರೀಯಿಸಿದ್ದು, ಇದು ಕೇವಲ ದೈಹಿಕ ದಾಳಿ ಅಲ್ಲ, ತತ್ವ ಸಿದ್ದಾಂತದ ಮೇಲೆ ನಡೆದ ದಾಳಿ. ಈ ರೀತಿಯ ದಾಳಿಗೆ ಕಾಂಗ್ರೆಸ್ ಭಯ ಪಡುವುದಿಲ್ಲ ಎಂದು ಹೇಳಿದರು.

ಮೊಟ್ಟೆ ಎಸೆಯುವ ಮೂಲಕ ಬಿಜೆಪಿಯವರು ನಮ್ಮನ್ನು ಹೆದರಿಸಲು ಸಾದ್ಯವಿಲ್ಲ. ಜನರಿಗೆ ತೊಂದರೆ ಆಗಿದೆ ಅಂದಾಗ ಅಲ್ಲಿಗೆ ಭೇಟಿ ನೀಡುವುದು ಜವಾಬ್ದಾರಿ, ಆದ್ದರಿಂದ ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದಾರೆ.
ರಾಜ್ಯ ಸರ್ಕಾರ ಕೋಮುವಾದಿಗಳ ಹಾಗೂ ಗೂಂಡಾಗಳ ಕೈಲಿದೆ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿದೆ.

ಸಾವರ್ಕರ್ ವಿರುದ್ಧ ಕಾಂಗ್ರೆಸ್ ಗೆ ಸೈದಾಂತಿಕ ಭಿನ್ನಾಭಿಪ್ರಾಯ ಇದೆ. ಅವರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂದು ಕಾಂಗ್ರೆಸ್ ಹೇಳಿಲ್ಲ. ಅಂಡಮಾನ್ ನಲ್ಲಿ ಶಿಕ್ಷೆಗೆ ಒಳಗಾದ ಅನೇಕರು ವಿವಿಧ ಹಿಂಸೆ ಅನುಭವಿಸಿದ್ದಾರೆ. ಅನೇಕ ಹೋರಾಟಗಾರರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವರ್ಕರ್ ಅಲ್ಲಿ ದಯಾ ಬಿಕ್ಷೆ ಕೇಳಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಬಂದ ಬಳಿಕ ಯಾವುದೇ ಹೋರಾಟದಲ್ಲಿ ಭಾಗಿಯಾಗಿಲ್ಲ. ಬದಲಾಗಿ ಪೆನ್ಷನ್ ಗಾಗಿ ಬ್ರಿಟಿಷರ ಬಳಿ ಅಂಗಲಾಚಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಧರ್ಮ ದಂಗಲ್ ಆರಂಭ ಆಗುತ್ತದೆ. ಬಿಜೆಪಿ ಸರ್ಕಾರ ಹೋಗದೆ ರಾಜ್ಯದಲ್ಲಿ ಜನರಿಗೆ ನೆಮ್ಮದಿ ಸಿಗಲಾರದು. ಮುಂದಿನ ಬಾರಿ ಅವರು ಅಧಿಕಾರಕ್ಕೆ ಬರೋದಿಲ್ಲ ಅನ್ನೋದು ಅರಿವಾಗಿದೆ. ಹೀಗಾಗಿ ಪರೋಕ್ಷವಾಗಿ ಇಂತಹ ಕೃತ್ಯಗಳಿಗೆ ಬೆಂಬಲ ನೀಡ್ತಾ ಇದ್ದಾರೆ ಎಂದು ಹೇಳಿದರು.
